ಹುಬ್ಬಳ್ಳಿ : ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ ಸಂಭವಿಸಿದೆ. ಹುಬ್ಬಳ್ಳಿಯ ಮಂಟೂರು ರಸ್ತೆ ಬಳಿ ನಡೆದ ಈ ಭೀಕರ ಘಟನೆ ನಡೆದಿದೆ, 15 ರಿಂದ 20 ಜನರ ಗುಂಪೊಂದು ಯುವಕನಿಗೆ ಮಾರಣಾಂತಿಕವಾಗಿ ಚಾಕು ಇರಿದು ಹತ್ಯೆ ಮಾಡಿದ್ದಾರೆ. ಮಂಟೂರು ರಸ್ತೆ ಬಳಿಯ ಅಂಗಡಿಯೊಂದರ ಮುಂದೆ ಮೃತ ಮಹಮ್ಮದ್ ಮಲ್ಲಿಕ್ ಅವರು ತಮ್ಮ ಮೂವರು ಸ್ನೇಹಿತರೊಂದಿಗೆ ಕುಳಿತಿದ್ದಾಗ, ಏಕಾಏಕಿ ಬಂದ ಈ ಗುಂಪು ಮಲ್ಲಿಕ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ದಾಳಿಕೋರರು ಚಾಕುಗಳಿಂದ ಮಲ್ಲಿಕ್ ಅವರಿಗೆ ಮನಬಂದಂತೆ ಇರಿದಿದ್ದು, ಗಂಭೀರವಾಗಿ ಗಾಯಗೊಂಡ ಮಲ್ಲಿಕ್ ಅವರನ್ನು ಕೂಡಲೇ ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಲ್ಲಿಕ್ ಅವರು ಕೊನೆಯುಸಿರೆಳೆದಿದ್ದಾರೆ. ಈ ವೇಳೆ ಮಲ್ಲಿಕ್ ಜೊತೆಗಿದ್ದ ಇನ್ನೊಬ್ಬ ಯುವಕನ ಮೇಲೂ ಹಲ್ಲೆ ನಡೆದಿದ್ದು, ಆತನೂ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಹತ್ಯೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಡೆದಿದೆ. ಮೃತ ಮಲ್ಲಿಕ್ ಅವರು ಎಂ.ಡಿ. ದಾವೂದ್ ಗ್ಯಾಂಗ್‌ನ ಸಹಚರನಾಗಿದ್ದರು. ಆರೋಪಿಗಳೆಂದು ಹೇಳಲಾದ ಶ್ಯಾಮ್ ಜಾಧವ್ ಮತ್ತು ಎಂ.ಡಿ. ದಾವೂದ್ ಗ್ಯಾಂಗ್‌ಗಳ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದ್ದು, ಹಳೆಯ ವೈಷಮ್ಯದಿಂದಲೇ ಈ ದಾಳಿ ನಡೆದಿದೆ. ದಾಳಿಯಲ್ಲಿ ಶ್ಯಾಮ್ ಜಾಧವ್, ಬಾಲಾಜಿ, ಹಕೀಬ್ ಸೇರಿ ಹಲವರ ಕೈವಾಡ ಇದೆ ಎಂದು ಮಲ್ಲಿಕ್ ಬೆಂಬಲಿಗರು ಆರೋಪಿಸಿದ್ದಾರೆ.

ಯುವಕನ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ, ಮಹಮ್ಮದ್ ಮಲ್ಲಿಕ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಿಮ್ಸ್ ಆಸ್ಪತ್ರೆಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಸ್ಥಿತಿಯನ್ನು ಹತೋಟಿಗೆ ತಂದು, ಜಮಾಯಿಸಿದ್ದ ಜನರನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸಿದರು.
ಇದನ್ನೂ ಓದಿ : ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್!







