ಬಿಹಾರದಲ್ಲಿ ‘ಗದ್ದುಗೆ’ಯತ್ತ NDA ಮೈತ್ರಿಕೂಟ – 190+ ಕ್ಷೇತ್ರಗಳಲ್ಲಿ ನಿತೀಶ್ ಕುಮಾರ್ ಮುನ್ನಡೆ!

ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ NDA (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ) ಮೈತ್ರಿಕೂಟವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ‘ಗದ್ದುಗೆ’ಯತ್ತ ಮುನ್ನುಗ್ಗುತ್ತಿದೆ. ಬಿಹಾರದ ಮತದಾರರು ಮತ್ತೊಮ್ಮೆ ನಿತೀಶ್ ಕುಮಾರ್ ಅವರ ಆಡಳಿತವನ್ನು ಬೆಂಬಲಿಸಿದ್ದಾರೆ. NDA ಮೈತ್ರಿಕೂಟವು ಬಹುಮತದ ಗಡಿಯನ್ನು ದಾಟಿ ಪ್ರಬಲ ಮುನ್ನಡೆ ಕಾಯ್ದುಕೊಂಡಿದೆ. ಈ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) (JDU) ಪಕ್ಷವು ಮೈತ್ರಿಕೂಟದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. JDU ಪಕ್ಷವು ಬಿಜೆಪಿಯನ್ನು ಹಿಂದಿಕ್ಕಿ, ಸುಮಾರು 73 ಕ್ಷೇತ್ರಗಳಲ್ಲಿ ಪ್ರಬಲ ಮುನ್ನಡೆ ಸಾಧಿಸಿದೆ. ಈ ಫಲಿತಾಂಶವು ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಅವರ ವರ್ಚಸ್ಸು ಮತ್ತೆ ಕಮಾಲ್ ಮಾಡಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದ ಅಧಿಕಾರದ ಚುಕ್ಕಾಣಿ ಫಿಕ್ಸ್ ಆಗುವುದು ಬಹುತೇಕ ಖಚಿತವಾಗಿದೆ.

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ (Congress) ಮತ್ತೊಮ್ಮೆ ಭಾರೀ ಮುಜುಗರ ಎದುರಾಗಿದೆ. ಚುನಾವಣಾ ಆಯೋಗದ ಮಾಹಿತಿಯಂತೆ, ಕಾಂಗ್ರೆಸ್ ಪಕ್ಷವು ಎರಡಂಕಿ ಸ್ಥಾನಗಳ ಗಡಿಯನ್ನು ದಾಟಲು ಸಹ ಕಷ್ಟಪಡುತ್ತಿದೆ. ಕಾಂಗ್ರೆಸ್‌ನ ಪ್ರಮುಖ ಪ್ರಚಾರಕರಾದ ರಾಹುಲ್ ಗಾಂಧಿ ಅವರು ಬಿಹಾರದಲ್ಲಿ ನಡೆಸಿದ ರ್ಯಾಲಿಗಳು ಮತ್ತು ಪ್ರಚಾರವು ಬಿಹಾರಿ ಮತದಾರರ ಮನ ಗೆಲ್ಲುವಲ್ಲಿ ಸಂಪೂರ್ಣವಾಗಿ ವಿಫಲವಾದಂತಿದೆ. ಇತ್ತೀಚೆಗೆ ದೇಶಾದ್ಯಂತ ಕಾಂಗ್ರೆಸ್ ಪಕ್ಷವು ‘ಮತಗಳ್ಳತನ’ದ ಬಗ್ಗೆ ತೀವ್ರವಾಗಿ ನಡೆಸಿದ್ದ ‘ವೋಟ್ ಚೋರ್’ ಅಭಿಯಾನವು ಈ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಮೂಡಿಸಿತ್ತಾದರೂ, ಬಿಹಾರದ ನೆಲದಲ್ಲಿ ಈ ಅಭಿಯಾನವು ಯಾವುದೇ ಸಕಾರಾತ್ಮಕ ಪರಿಣಾಮ ಬೀರದೆ ಠುಸ್ ಆಗಿದೆ. ಈ ಹೀನಾಯ ಫಲಿತಾಂಶದೊಂದಿಗೆ ಕಾಂಗ್ರೆಸ್ ಪಕ್ಷವು ಮತ್ತೊಂದು ಪ್ರಮುಖ ಚುನಾವಣೆಯಲ್ಲಿ ಮುಗ್ಗರಿಸಿದಂತಾಗಿದೆ.

ಬಿಹಾರದ ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ, ಆರ್​​ಜೆಡಿ (RJD) ಮುಖ್ಯಸ್ಥ ತೇಜಸ್ವಿ ಯಾದವ್ ಅವರಿಗೆ ಚುನಾವಣಾ ಮತ ಎಣಿಕೆಯ ಆರಂಭಿಕ ಸುತ್ತುಗಳಲ್ಲಿ ಭಾರೀ ಹಿನ್ನಡೆ ಎದುರಾಗಿದೆ. ತೇಜಸ್ವಿ ಯಾದವ್ ಅವರು ಸ್ಪರ್ಧಿಸಿರುವ ನಿರ್ಣಾಯಕ ಕ್ಷೇತ್ರವಾದ ರಾಘೋಪುರದಲ್ಲಿ ಈ ಹಿನ್ನಡೆ ಉಂಟಾಗಿದ್ದು, ಅವರ ವಿರುದ್ಧ ಸ್ಪರ್ಧಿಸಿರುವ ಬಿಜೆಪಿಯ ಸತೀಶ್ ಕುಮಾರ್ ಅವರು ಪ್ರಬಲ ಮುನ್ನಡೆ ಸಾಧಿಸಿದ್ದಾರೆ. ತೇಜಸ್ವಿ ಯಾದವ್ ಅವರು 1,200ಕ್ಕೂ ಹೆಚ್ಚು ಮತಗಳ ಅಂತರದಿಂದ ಹಿನ್ನಡೆಯಲ್ಲಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಮುಂದುವರೆದಿದ್ದು, NDA 192 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ NDA ಬಹುಮತದತ್ತ ಭಾರೀ ಮುನ್ನಡೆ ಸಾಧಿಸಿದೆ. ವಿರೋಧ ಪಕ್ಷಗಳಾದ ಮಹಾಘಟಬಂಧನ್ ಮೈತ್ರಿಕೂಟ ಕೇವಲ 46 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ತೀವ್ರ ಹಿನ್ನಡೆ ಅನುಭವಿಸಿದೆ.. NDA – 190, MGB – 46, JSP – 0, OTH – 2 ಸ್ಥಾನಗಳಲ್ಲಿ ಮುನ್ನಡೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೋಡಿ ಮತ್ತೊಮ್ಮೆ ಕಮಾಲ್ ಮಾಡಿದೆ. NDA ಮೈತ್ರಿಕೂಟವು ಸ್ಪಷ್ಟ ಬಹುಮತದೊಂದಿಗೆ ಭರ್ಜರಿ ಗೆಲುವು ಸಾಧಿಸಿದೆ, ಇದರೊಂದಿಗೆ ಸಿಎಂ ನಿತೀಶ್ ಕುಮಾರ್ ಅವರ ವರ್ಚಸ್ಸು ಮತ್ತು ಸುಶಾಸನದ ಆಡಳಿತಕ್ಕೆ ಬಿಹಾರಿ ಮತದಾರರು ಬಹುಪರಾಕ್ ಹೇಳಿದ್ದಾರೆ. ಪಾಟ್ನಾದ ಜನತಾ ದಳ ಪಕ್ಷದ ಕೇಂದ್ರ ಕಚೇರಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. NDA ಕಾರ್ಯಕರ್ತರು, ಅದರಲ್ಲೂ ವಿಶೇಷವಾಗಿ JDU ಕಾರ್ಯಕರ್ತರು, ಪಟಾಕಿ ಸಿಡಿಸಿ, ಸಿಹಿ ಹಂಚಿ, ಕುಣಿದು ಕುಪ್ಪಳಿಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : JDS ನಾಯಕರ ನಡೆಯಿಂದ ನೋವಾಗಿದೆ.. ಪಕ್ಷದ ಕೆಲಸವಿಲ್ಲ, ಕಚೇರಿಗೆ ಯಾಕೆ ಹೋಗಲಿ – ಜಿ.ಟಿ ದೇವೇಗೌಡ!

Btv Kannada
Author: Btv Kannada

Read More