ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಯೋಜನೆಗೆ ತಡೆ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಅರ್ಜಿಯು ಅವಧಿಗೆ ಮುನ್ನವೇ ಸಲ್ಲಿಕೆಯಾಗಿದೆ ಎಂದು ನ್ಯಾಯಾಲಯ ಹೇಳಿದ್ದು, ಸದ್ಯಕ್ಕೆ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ .

ಮೇಕೆದಾಟು ಯೋಜನೆಯ ಪ್ರಸ್ತಾವನೆಯು ಇನ್ನೂ ತಜ್ಞ ಸಂಸ್ಥೆಗಳ ಪರಿಶೀಲನಾ ಹಂತದಲ್ಲಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೇರಿದಂತೆ ಹಲವಾರು ಸಮಿತಿಗಳು ಇದರ ಬಗ್ಗೆ ಚರ್ಚೆ ನಡೆಸುತ್ತಿವೆ. ಹೀಗಾಗಿ, ಈ ಹಂತದಲ್ಲಿ ನ್ಯಾಯಾಲಯವು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ರಾಜಧಾನಿ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವುದು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ಮೇಕೆದಾಟು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆದರೆ, ಈ ಯೋಜನೆಯಿಂದ ತಮಗೆ ಕಾವೇರಿ ನದಿಯಿಂದ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಎಂಬುದು ತಮಿಳುನಾಡಿನ ಪ್ರಮುಖ ಆತಂಕವಾಗಿದೆ.

ಈ ಕಾರಣದಿಂದಾಗಿ, ಯೋಜನೆಯನ್ನು ವಿರೋಧಿಸಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು . ಕರ್ನಾಟಕವು ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ ಮತ್ತು ನಿಯಮಿತವಾಗಿ ನೀರು ಹರಿಸಲು ಸಹಾಯಕವಾಗಲಿದೆ ಎಂದು ವಾದಿಸುತ್ತಲೇ ಬಂದಿದೆ.
Author: Btv Kannada
Post Views: 258







