ನೆಲಮಂಗಲ : ದುನಿಯಾ ವಿಜಯ್ ಹೆಸರು ಹೇಳಿ ಸೈಟ್ ಕೊಡಿಸುವುದಾಗಿ ನಂಬಿಸಿ ಕೋಟಿಗಟ್ಟಲೆ ಹಣ ವಂಚಿಸಿದ ಆರೋಪದ ಮೇಲೆ ಇಬ್ಬರ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಕನ್ಯಾ ಹಾಗೂ ನರಸಿಂಹ ಎಂಬುವವರ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.

ಲಕ್ಷ್ಮಿ ಪ್ರಸಾದ್ ಫೈನಾನ್ಸ್ ನಡೆಸುತ್ತಿದ್ದ ನರಸಿಂಹ ಎಂಬಾತ, ಸ್ಯಾಂಡಲ್‌ವುಡ್ ನಟ ದುನಿಯಾ ವಿಜಿ ಅವರೊಂದಿಗೆ ತೆಗೆಸಿಕೊಂಡಿರುವ ಹಲವು ಫೋಟೋಗಳನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ನಟ ವಿಜಿ ಅವರು ತನಗೆ ತುಂಬಾ ಆಪ್ತರು ಎಂದು ಗ್ರಾಹಕರನ್ನು ನಂಬಿಸಿ, ಸೈಟ್ ಕೊಡಿಸುವುದಾಗಿ ಮಾರ್ಕೆಟಿಂಗ್ ಮಾಡಿ ಹಣ ಪಡೆದಿದ್ದಾನೆ ಎಂಬ ಆರೋಪವಿದೆ.

ಗಂಗಮ್ಮ ಎಂಬುವವರ ಬಳಿ ಸೈಟ್ ಕೊಡಿಸುವುದಾಗಿ 28 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಗಂಗಮ್ಮ ಅವರು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಸಂದ್ರ ನಿವಾಸಿಯಾಗಿದ್ದಾರೆ.

ಇದೇ ರೀತಿ ನರಸಿಂಹ ಪೌರ ಕಾರ್ಮಿಕರ ಬಳಿಯೂ ಹಣ ಪಡೆದು ಸೈಟ್ ಕೊಡದೆ ವಂಚನೆ ಮಾಡಿದ್ದಾನೆ. ಸುಕನ್ಯಾ ಹಾಗೂ ನರಸಿಂಹ ದೊಡ್ಡಬಳ್ಳಾಪುರದಲ್ಲಿ ಲೇಔಟ್ ಮಾಡಲಾಗಿದೆ ಎಂದು ತೋರಿಸಿದ್ದರು. ನಂತರ ಹಂತ ಹಂತವಾಗಿ ಹಣ ಪಡೆದು ಸೈಟ್ ಕೊಡದೇ ಸತಾಯಿಸಿದ್ದರು. ಹಣ ವಾಪಸ್ ಕೊಡು ಎಂದರೆ ಹಣವೂ ನರಸಿಂಹ ಕೊಡದೇ ಧಮ್ಕಿ ಹಾಕಿದ್ದ. ಈ ಈ ಹಿನ್ನೆಲೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಇದನ್ನೂ ಓದಿ : ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡ್ತೀನಿ – ಕೆ.ಎನ್ ರಾಜಣ್ಣ!







