GST ಇಳಿಕೆ ಬೆನ್ನಲ್ಲೇ ದರ ಏರಿಕೆ ಮಾಡಿದ KMF – ನಂದಿನಿ ತುಪ್ಪದ ಬೆಲೆ 90 ರೂ. ಏರಿಕೆ!

ಬೆಂಗಳೂರು : ರಾಜ್ಯದ ಜನತೆಗೆ KMF ಮತ್ತೆ ದರ ಏರಿಕೆಯ ಶಾಕ್ ನೀಡಿದೆ. ನಂದಿನಿ ತುಪ್ಪದ ದರ ಪ್ರತಿ ಲೀಟರ್​ಗೆ 90 ರೂಪಾಯಿ ಏರಿಕೆ ಮಾಡಿದೆ. ಇತ್ತೀಚಿಗಷ್ಟೇ ಜಿಎಸ್​ಟಿ ದರ ಇಳಿಕೆಯಾದ ನಂತರ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ್ದ ಕೆಎಂಎಫ್ ದರ ಇಳಿಕೆ ಮಾಡಿತ್ತು. ನಂದಿನಿ ತುಪ್ಪದ ಬೆಲೆ ಲೀಟರ್​​ಗೆ 40 ರೂ. ಇಳಿಕೆ ಮಾಡಿತ್ತು. ಆದರೆ, ಇದೀಗ ತುಪ್ಪಕ್ಕೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ದಿಢೀರ್ ಆಗಿ ದರ ಏರಿಕೆ ಮಾಡಿದೆ.

ಒಂದು ಲೀಟರ್ ನಂದಿನಿ ತುಪ್ಪಕ್ಕೆ ಈಗ 700 ರೂಪಾಯಿ ದರ ನಿಗದಿ ಮಾಡಲಾಗಿದೆ. ಈ ಮೊದಲು ಮೊದಲು 610 ರೂಗೆ ಒಂದು ಲೀಟರ್​ ತುಪ್ಪ ಮಾರಾಟ ಮಾಡಲಾಗುತ್ತಿತ್ತು. ಜಿಎಸ್​ಟಿ ಸುಧಾರಣೆ ಬಳಿಕ 40 ರೂಪಾಯಿ ಇಳಿಕೆ ಮಾಡಲಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ದರ ಏರಿಕೆ ಹಿನ್ನೆಲೆ ದಿಢೀರ್ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಕೆಎಂಎಫ್ ತಿಳಿಸಿದೆ. ನಂದಿನಿ ತುಪ್ಪದ ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗುತ್ತಿದೆ.

ನಂದಿನಿ ತುಪ್ಪದ ಬೆಲೆ 
  • 50 ಎಂಎಲ್​​ – 47
  • 100 ಎಂಎಲ್ – 75
  • 200 ಎಂಎಲ್ – 155–165
  • 500 ಎಂಎಲ್ – 350–360
  • 1 ಲೀಟರ್​ (1000 ಎಂಎಲ್) – 700–720

2017 ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್​​ಟಿ) ವಿಧಿಸಲಾಗಿತ್ತು. ಆ ನಂತರದಲ್ಲಿ 2022 ರಲ್ಲಿ ಜಿಎಸ್​​ಟಿ ಪ್ರಮಾಣವನ್ನು ಶೇಕಡಾ 22ಕ್ಕೆ ಏರಿಕೆ ಮಾಡಲಾಗಿತ್ತು. ಆದರೆ ಸೆಪ್ಟೆಂಬರ್​​ನಲ್ಲಿ ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು ಶೇ 12ರಿಂದ 5ಕ್ಕೆ ಇಳಿಕೆ ಮಾಡಿದ್ದು, ಸೆಪ್ಟೆಂಬರ್ 22ರಿಂದ ಜಾರಿಗೆ ಬಂದಿದೆ. ಈ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿತ್ತು. ಆ ಬಳಿಕ ರಾಜ್ಯದಲ್ಲಿ ಹಾಲಿನ ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗಿತ್ತು. ಆದರೆ, ಇದೀಗ ಮತ್ತೆ ತುಪ್ಪದ ದರ ಏರಿಕೆಯಾಗಿದೆ.

ಇದನ್ನೂ ಓದಿ : ಡಿಸಿಎಂ ಡಿಕೆಶಿ ಭೇಟಿಯಾದ ರಿಯಲ್ ಸ್ಟಾರ್ ಉಪೇಂದ್ರ!

Btv Kannada
Author: Btv Kannada

Read More