ಕೊನೆಗೂ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಡಾದ ರಾಜ್ಯ ಸರ್ಕಾರ – ಸಿಎಂ ನಿರ್ದೇಶನದ ಮೇರೆಗೆ ಇಂದು ಬೆಳಗಾವಿಗೆ ಹೆಚ್.ಕೆ. ಪಾಟೀಲ್!

ಬೆಳಗಾವಿ : ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಭಾರಿ ಹೋರಾಟದ ಕಿಚ್ಚು ಹೆಚ್ಚಾಗಿದ್ದು, ಕಬ್ಬು ಬೆಳೆಗಾರರ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ. ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ ಬಳಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯಿಂದಾಗಿ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಪ್ರತಿ ಟನ್‌ ಕಬ್ಬಿಗೆ ₹3,500 ನೀಡುವಂತೆ ರೈತರು ಸತತವಾಗಿ ಆಗ್ರಹಿಸುತ್ತಿದ್ದಾರೆ.

ಗುರ್ಲಾಪುರ ಕ್ರಾಸ್ ಬಳಿ ರಸ್ತೆ ಮಧ್ಯೆದಲ್ಲೇ ರೈತರು ಧರಣಿ ಕುಳಿತಿದ್ದು, ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ರೈತ ಸಂಘಟನೆಗಳು ನಿನ್ನೆ ಅಥಣಿ ಬಂದ್‌ಗೆ ಕರೆ ನೀಡಿದ್ದವು, ಅದರ ಮುಂದುವರಿದ ಭಾಗವಾಗಿ ಇಂದು ಹುಕ್ಕೇರಿ ಪಟ್ಟಣ ಬಂದ್ ಮಾಡಲು ನಿರ್ಧರಿಸಲಾಗಿದೆ. ಅಥಣಿ, ಹುಕ್ಕೇರಿ ಮತ್ತು ಚಿಕ್ಕೋಡಿಯಲ್ಲಿ ರೈತರು ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ. ಕಬ್ಬು ಬೆಳೆಗಾರರ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಲ ತುಂಬಿದ್ದಾರೆ. ತಮ್ಮ ಜನ್ಮದಿನದ ಸಂಭ್ರಮವನ್ನು ಬದಿಗಿಟ್ಟು ರಾತ್ರಿಯಿಡೀ ರೈತರ ಜೊತೆ ಕಳೆದ ವಿಜಯೇಂದ್ರ ಅವರು ಅನ್ನದಾತರ ಹೃದಯ ಗೆದ್ದಿದ್ದಾರೆ.

ರೈತರು ರಾಷ್ಟ್ರೀಯ ಹೆದ್ದಾರಿ ತಡೆಯುವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕೊನೆಗೂ ರಾಜ್ಯ ಸರ್ಕಾರವು ಹೋರಾಟಕ್ಕೆ ಬೆಂಡಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ, ಸಚಿವ ಹೆಚ್.ಕೆ. ಪಾಟೀಲ್ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಸಚಿವರು ಮಧ್ಯಾಹ್ನ 2 ಗಂಟೆಗೆ ಗುರ್ಲಾಪುರ ಕ್ರಾಸ್‌ಗೆ ಆಗಮಿಸಿ ಸರ್ಕಾರದ ಸಂದೇಶವನ್ನು ರೈತರಿಗೆ ತಿಳಿಸಿ, ಸಂಧಾನಕ್ಕೆ ಮುಂದಾಗಲಿದ್ದಾರೆ. ಸರ್ಕಾರದ ಸಂಧಾನ ವಿಫಲವಾದರೆ ಹೋರಾಟವನ್ನು ಇನ್ನಷ್ಟು ಹೆಚ್ಚಿಸಲು ರೈತರು ಸಿದ್ಧರಾಗಿದ್ದಾರೆ.

ಸಂಧಾನ ಮಾತುಕತೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿಗಳನ್ನು ಟಾರ್ಗೆಟ್ ಮಾಡಲಾಗುವುದು. ನವೆಂಬರ್ 7ರಂದು ಕಿತ್ತೂರು ಕರ್ನಾಟಕ ಭಾಗದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲು ರೈತರು ತೀರ್ಮಾನಿಸಿದ್ದಾರೆ. ಕಬ್ಬು ಬೆಳೆಗಾರರ ಹೋರಾಟಕ್ಕೆ ಕನ್ನಡಪರ ಸಂಘಟನೆಗಳೂ ಕೈ ಜೋಡಿಸಿವೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. “ರೈತರ ಕೈ ಹಿಡಿಯೋಣ-ಬೆವರಿನ ಬೆಲೆ ಕೊಡಿಸೋಣ” ಎಂಬ ಘೋಷವಾಕ್ಯದೊಂದಿಗೆ ಬೆಳಗಾವಿಯ ಸುವರ್ಣಸೌಧದ ಬಳಿ ಈ ಹೋರಾಟ ನಡೆಯಲಿದೆ. ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವ ವಹಿಸಲಿದ್ದಾರೆ. ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ.

ಇದನ್ನೂ ಓದಿ : ಎಣ್ಣೆ ಕಿಕ್​ನಲ್ಲಿ ಬೇಕರಿ ಕಳ್ಳತನಕ್ಕೆ ಯತ್ನ- ಸಿಮೆಂಟ್ ಬ್ಲಾಕ್​​ನಿಂದ ಬೇಕರಿ ಬೀಗ ಒಡೆಯಲು ಯತ್ನಿಸಿದ ಖದೀಮ!

Btv Kannada
Author: Btv Kannada

Read More