ಬೆಂಗಳೂರು : EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಬರೋಬ್ಬರಿ 70 ಕೋಟಿ ರೂ. ವಂಚನೆ ನಡೆದಿರುವ ಆರೋಪದ ಮೇಲೆ, ಸೊಸೈಟಿಯ CEO ಸೇರಿದಂತೆ ಇಬ್ಬರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಇಓ ಗೋಪಿ ಹಾಗೂ ಸಿಬ್ಬಂದಿ ಲಕ್ಷ್ಮೀ ಜಗದೀಶ್ ಬಂಧಿತ ಆರೋಪಿಗಳಾಗಿದ್ದಾರೆ.

ಇದು EPFO ಸಿಬ್ಬಂದಿಗಳೇ ತಮ್ಮ ಪರಸ್ಪರ ಸಹಕಾರಕ್ಕಾಗಿ 61 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಒಂದು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ. EPFO ಸಿಬ್ಬಂದಿಗಳು ಮತ್ತು ನಿವೃತ್ತ ಸಿಬ್ಬಂದಿಗಳು ಈ ಸೊಸೈಟಿಯಲ್ಲಿ ಸ್ಥಿರ ಠೇವಣಿ (FD) ಇಟ್ಟಿದ್ದರು. ನಿಯಮದಂತೆ, ಪ್ರತಿ ತಿಂಗಳು ಹೂಡಿಕೆದಾರರಿಗೆ ಬಡ್ಡಿ ಹಣ ಜಮೆಯಾಗುತ್ತಿತ್ತು.

ಕಳೆದ ಮೂರು ತಿಂಗಳುಗಳಿಂದ ಹೂಡಿಕೆದಾರರಿಗೆ ಬಡ್ಡಿ ಹಣ ಬರುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಹೂಡಿಕೆದಾರರು ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ಹೂಡಿಕೆದಾರರ ಭಾರಿ ಮೊತ್ತದ ಎಫ್.ಡಿ. ಹಣವು ಸೊಸೈಟಿಯ ಖಾತೆಯಲ್ಲಿ ಲಭ್ಯವಿಲ್ಲ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಸೊಸೈಟಿಯು ಕೇವಲ ಮೂರು ಕೋಟಿಯಷ್ಟು ಹಣವನ್ನು ಮಾತ್ರ ಸಾಲ ರೂಪದಲ್ಲಿ ವಿತರಿಸಿದ್ದು, ಉಳಿದ ಹಣ ನಾಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ. ಹಾಗಾಗಿ ಸಿಇಓ ಮತ್ತು ಸಿಬ್ಬಂದಿಗಳು ಉಳಿದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೂಡಿಕೆದಾರರು ಆರೋಪಿಸಿದ್ದಾರೆ.
ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಆರಂಭಿಸಿದ ಕಬ್ಬನ್ ಪಾರ್ಕ್ ಪೊಲೀಸರು, ತಕ್ಷಣವೇ ಸಿಇಓ ಗೋಪಿ ಮತ್ತು ಸಿಬ್ಬಂದಿ ಲಕ್ಷ್ಮೀ ಜಗದೀಶ್ ಅವರನ್ನು ಬಂಧಿಸಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಬ್ಬ ಪ್ರಮುಖ ವ್ಯಕ್ತಿ, ಅಕೌಂಟೆಟ್ ಜಗದೀಶ್ ಸದ್ಯ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ವಿಶ್ವದ ಪ್ರಭಾವಿ ನಾಯಕರಾದ ಸಚಿವ ಪ್ರಹ್ಲಾದ್ ಜೋಶಿ – TIME 100 ಹವಾಮಾನ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ!







