ಖ್ಯಾತ ಡ್ಯಾನ್ಸರ್ ಸುಧೀಂದ್ರ ರಸ್ತೆ ಅಪಘಾತದಲ್ಲಿ ದುರ್ಮರಣ – ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ!

ನೆಲಮಂಗಲ : ಖ್ಯಾತ ಡ್ಯಾನ್ಸರ್ ಮತ್ತು ಡ್ಯಾನ್ಸ್ ಕ್ಲಾಸ್ ಶಿಕ್ಷಕ ಸುಧೀಂದ್ರ (35) ಅವರು, ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿನ್ನೆಯಷ್ಟೇ ಖರೀದಿಸಿದ್ದ ಹೊಸ ಕಾರು ಮಾರುತಿ ಸುಜುಕಿ ಎಕೋ ಕೆಟ್ಟು ನಿಂತಿತ್ತು ಪರಿಶೀಲನೆಗೆ ಎಂದು ಇಳಿದಿದ್ದಾಗ ಇದೇ ವೇಳೆ, ವೇಗವಾಗಿ ಬಂದ ಕ್ಯಾಂಟರ್ ಲಾರಿಯೊಂದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಸುಧೀಂದ್ರ ಅವರು ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ. ಸುಧೀಂದ್ರ ಅವರು ಹಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಹೆಸರುವಾಸಿಯಾಗಿದ್ದರು. ಅವರು ಡಾಬಸ್ ಪೇಟೆಯಲ್ಲಿ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದರು. ಜೊತೆಗೆ ಅವರು ಫ್ಲವರ್ ಡೆಕೋರೇಟರ್ ಹಾಗೂ ಇವೆಂಟ್ ಮ್ಯಾನೇಜರ್ ಆಗಿಯೂ ಕೆಲಸ ಮಾಡುತ್ತಿದ್ದರು.

ಈ ಸಂಬಂಧ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ಯಾಂಟರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಜಮೀನು ಸಮಸ್ಯೆ ಬಗೆಹರಿಯದಿದ್ದಕ್ಕೆ ಬೆಂಕಿ ಹಚ್ಚಿಕೊಂಡು ರೈತ ಆತ್ಮಹತ್ಯೆಗೆ ಯತ್ನ!

Btv Kannada
Author: Btv Kannada

Read More