ಧರ್ಮಸ್ಥಳ ಪ್ರಕರಣ – SITಗೆ ಪತ್ರ ಬರೆದ ಮಹಿಳಾ ಆಯೋಗ!

ಬೆಂಗಳೂರು : ಧರ್ಮಸ್ಥಳ ಗ್ರಾಮದ ಪ್ರಕರಣದ ಸಂಪೂರ್ಣ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕೆಂದು SITಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಪತ್ರ ಬರೆದು ಆಗ್ರಹಿಸಿದೆ.

ಎಸ್‌ಐಟಿಯು ಕೂಡಲೇ ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಅವರ ಅತ್ಯಾಚಾರ, ಕೊಲೆ ಪ್ರಕರಣಗಳನ್ನೂ ಸೇರಿದಂತೆ ಅಸಹಜ ಮತ್ತು ಅನುಮಾನಾಸ್ಪದ ಸಾವುಗಳು ಮತ್ತಿತರ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಳ್ಳುವಂತೆ ಅಥವಾ ಕೈಗೊಂಡಿದ್ದರೆ ಈ ಬಗ್ಗೆ ಮಾಹಿತಿಯನ್ನು ಆಯೋಗಕ್ಕೆ ನೀಡುವಂತೆ SITಗೆ ಮನವಿ ಮಾಡಿದೆ.

ಪತ್ರದಲ್ಲಿ ಏನಿದೆ? 

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ ಬಗ್ಗೆ ಹಾಗೂ 2025 ಜುಲೈ.12ರಂದು ಟೈಮ್ಸ್ ನೌ ಮತ್ತಿತರ ಮಾಧ್ಯಮಗಳು ಮನುಷ್ಯರೊಬ್ಬರ ತಲೆಬುರುಡೆ ದೊರಕಿರುವ ಬಗ್ಗೆ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದ ಹೇಳಿಕೆಯ ವರದಿಯನ್ನು ಪ್ರಕಟಿಸಿತ್ತು. ಈ ಬಗ್ಗೆ 2025 ಜುಲೈ.14ರಂದು ಆಯೋಗ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿತ್ತು. ಮಾಧ್ಯಮ ವರದಿ ಹಾಗೂ ಶವಗಳನ್ನು ಹೂತಿರುವ ವ್ಯಕ್ತಿಯ ಹೇಳಿಕೆಯಲ್ಲಿ, ಕಳೆದ 20ಕ್ಕೂ ಹೆಚ್ಚು ವರ್ಷ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕವಾದ ಸಾವು ಮತ್ತು ನಾಪತ್ತೆ ಪ್ರಕರಣಗಳು ಹಲವು ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಮೇಲೆ ನಡೆದಿರುವ ಬಗ್ಗೆ ತಿಳಿಸಲಾಗಿದೆ. ಧರ್ಮಸ್ಥಳದ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ, ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕವಾದ ಸಾವು ಪ್ರಕರಣಗಳು, ಮತ್ತು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ, ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕಾಗಿ ಮಹಿಳಾ ಆಯೋಗ ಮನವಿ ಮಾಡಿತ್ತು.

ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯು ಸಮಗ್ರವಾಗಿ ನಡೆಯಬೇಕೆಂಬ ಆಶಯದಿಂದ ಆಯೋಗದ ವತಿಯಿಂದ ಬರೆದ ಪತ್ರಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರ್ಕಾರವು ಕೂಡಲೇ ಕಾರ್ಯಪ್ರವೃತ್ತವಾಗಿ, ತಮ್ಮ ನೇತೃತ್ವದಲ್ಲಿ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನಿಯಮಿಸುತ್ತಾ, ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಎಸ್‌ಐಟಿ ರಚನೆ ಕುರಿತ ಸರ್ಕಾರದ ಆದೇಶದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ಕೆಳಕಂಡ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ಸರ್ಕಾರ ಆದೇಶಿಸಿದೆ ಮೇಲ್ಕಂಡ ಪ್ರಕರಣವೂ ಸೇರಿದಂತೆ ಹಾಗೂ ಇದರ ಸಂಬಂಧ ಕರ್ನಾಟಕ ರಾಜ್ಯದ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಇತರೆ ಎಲ್ಲಾ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ಡಿಜಿ ಮತ್ತು ಐಜಿಪಿರವರು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸುವುದು ಹಾಗೂ ವಿಶೇಷ ತನಿಖಾ ತಂಡಕ್ಕೆ ಅಗತ್ಯವಿರುವ ಇತರೆ ಅಧಿಕಾರಿಗಳನ್ನು ಒದಗಿಸುವುದು ಎಂದು ಆದೇಶಿಸಲಾಗಿದೆ.

ಹೀಗೆ ಎಸ್‌ಐಟಿ ರಚನೆಯಾಗಬೇಕೆಂಬ ಕೋರಿಕೆಯ ಆಶಯವೂ ಮತ್ತು ಸರ್ಕಾರದ ಆದೇಶವೂ ಕೇವಲ ಸೆಕ್ಷನ್ ಕಲಂ 211 (ಎ), ಬಿಎನ್‌ಎಸ್ ಪ್ರಕರಣದ ತನಿಖೆಗೆ ಸೀಮಿತವಾಗಿರದೆ, ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ‘ಸಮಗ್ರ’ ತನಿಖೆಯನ್ನು ಎಸ್‌ಐಟಿ ಮಾಡಬೇಕೆಂಬುದನ್ನು ಸೂಚಿಸುತ್ತದೆ. ಹೀಗಿದ್ದರೂ, ಈವರೆಗೆ ಎಸ್‌ಐಟಿ ಅಂತಹ ಪ್ರಕರಣಗಳನ್ನು ತನಿಖೆ ಮಾಡುತ್ತಿರುವ ಬಗ್ಗೆ ಯಾವುದೇ ಮಾಹಿತಿ ಕಂಡು ಬರುತ್ತಿಲ್ಲ.

ಮಾಧ್ಯಮಗಳ ವರದಿಯನ್ನು ಗಮನಿಸಿದಾಗ ಎಸ್‌ಐಟಿ ರಚನೆಯಾದಾಗಿನಿಂದ ಕೇವಲ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ‘ಚಿನ್ನಯ್ಯ’ ಎಂಬ ವ್ಯಕ್ತಿಯ ಹೇಳಿಕೆಯನ್ನು ಆಧರಿಸಿ ಮಾನವ ಕಳೇಬರಹಗಳ ಉತ್ಪನನಕ್ಕೆ ಸೀಮಿತವಾಗಿ ಆತನ ಹೇಳಿಕೆಯ ಮಿತಿಯೊಳಗೆ ತನಿಖೆ ನಡೆದಿರುವುದು ಕಂಡುಬಂದಿದೆ. ಉತ್ಪನದ ಸಂದರ್ಭದಲ್ಲಿ ದೊರೆತ ಅಸ್ಥಿಪಂಜರಗಳ ಅವಶೇಷಗಳ ಬಗ್ಗೆ ಸಾವು ಸಂಭವಿಸಿದ ಕಾರಣದ ಬಗ್ಗೆ ಅವುಗಳಲ್ಲಿ ಮಹಿಳೆಯರ ಅಸ್ಥಿಪಂಜರಗಳನ್ನು ಗುರುತಿಸುವ ಬಗ್ಗೆ, ಕಾಡಿನ ಪ್ರದೇಶದಲ್ಲಿ ಅಸ್ಥಿಪಂಜರ ದೊರೆಯಲು ಕಾರಣಗಳ ಬಗ್ಗೆ ಮಾಹಿತಿ ಪತ್ತೆ ಹಚ್ಚುವ ಜೊತೆಗೆ, ಎಸ್‌ಐಟಿ ರಚನೆಯ, ಆಯೋಗದ ಕೋರಿಕೆ ಮತ್ತು ನಂತರದ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಎಸ್‌ಐಟಿಯು ಕೂಡಲೇ ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಅವರ ಅತ್ಯಾಚಾರ, ಕೊಲೆ ಪ್ರಕರಣಗಳನ್ನೂ ಸೇರಿದಂತೆ ಅಸಹಜ ಮತ್ತು ಅನುಮಾನಾಸ್ಪದ ಸಾವುಗಳು ಮತ್ತಿತರ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಳ್ಳುವಂತೆ ಅಥವಾ ಕೈಗೊಂಡಿದ್ದರೆ ಈ ಬಗ್ಗೆ ಮಾಹಿತಿಯನ್ನು ಆಯೋಗಕ್ಕೆ ನೀಡುವಂತೆ ಕೋರಲಾಗಿದೆ.

ಇದನ್ನೂ ಓದಿ : ಬೆಂಗಳೂರು CCB ಪೊಲೀಸರ ಭರ್ಜರಿ ಕಾರ್ಯಾಚರಣೆ – ಚಿನ್ನದಂಗಡಿ ಹೆಸರಲ್ಲಿ ವಂಚಿಸ್ತಿದ್ದ ಆರೋಪಿಗಳು ಅರೆಸ್ಟ್.. 1.5 ಕೋಟಿ ಮೌಲ್ಯದ ಗೋಲ್ಡ್ ಸೀಜ್!

Btv Kannada
Author: Btv Kannada

Read More