ವಿಜಯಪುರ : ಬಿಜೆಪಿ ನಾಯಕ ವಿಜುಗೌಡ ಪಾಟೀಲ ಅವರ ಪುತ್ರ ಸಮರ್ಥ್ ಗೌಡ ಪಾಟೀಲ ಅವರು ಟೋಲ್ ಸಿಬ್ಬಂದಿಯ ಮೇಲೆ ದಾಂಧಲೆ ನಡೆಸಿ, ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಗ್ರಾಮದ ಬಳಿಯ ಟೋಲ್ ಗೇಟ್‌ನಲ್ಲಿ ಈ ಘಟನೆ ನಡೆದಿದೆ.

ವಿಜಯಪುರದಿಂದ ಸಿಂದಗಿ ಕಡೆಗೆ ಕಪ್ಪು ಬಣ್ಣದ ಥಾರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಮರ್ಥ್ ಗೌಡ ಪಾಟೀಲ ಅವರು ಕನ್ನೊಳ್ಳಿ ಟೋಲ್ ಬಳಿ ಬಂದಿದ್ದಾರೆ. ಟೋಲ್ ಸಿಬ್ಬಂದಿ ವಾಹನ ಶುಲ್ಕ (ಹಣ) ಕೇಳಿದ್ದಾರೆ. ಈ ವೇಳೆ, ತಾನು ‘ವಿಜುಗೌಡ ಪಾಟೀಲ ಅವರ ಮಗ’ ಎಂದು ಸಮರ್ಥ್ ಗೌಡ ಹೇಳಿದ್ದಾರೆ.

ಆದರೆ, ಟೋಲ್ ಸಿಬ್ಬಂದಿ ‘ಯಾವ ವಿಜುಗೌಡರೀ?’ ಎಂದು ಮರುಪ್ರಶ್ನೆ ಕೇಳಿದ್ದಕ್ಕೆ ಸಮರ್ಥ್ ಗೌಡ ಕೆರಳಿದ್ದಾರೆ. ತಕ್ಷಣವೇ ತಮ್ಮ ಗ್ಯಾಂಗ್‌ನೊಂದಿಗೆ ಟೋಲ್ ಸಿಬ್ಬಂದಿ ಸಂಗಪ್ಪ ಎಂಬುವವರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಟೋಲ್ ಸಿಬ್ಬಂದಿ ಸಂಗಪ್ಪ ಅವರನ್ನು ಕೂಡಲೇ ಸಿಂದಗಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಬಿಜೆಪಿ ನಾಯಕರ ಪುತ್ರನ ಈ ಗೂಂಡಾಗಿರಿ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ – ವಿವಿಧ ಕ್ಷೇತ್ರಗಳ 70 ಮಂದಿ ಸಾಧಕರಿಗೆ ರಾಜ್ಯೋತ್ಸವ ಗೌರವ







