ಮೊಬೈಲ್ ಕದಿಯಲು ಅಲ್ಯೂಮಿನಿಯಂ ಫಾಯಿಲ್ ಬಳಕೆ – 6 ಮಂದಿ ಖತರ್ನಾಕ್ ಕಳ್ಳರು ಅರೆಸ್ಟ್, 450 ಮೊಬೈಲ್ ವಶಕ್ಕೆ!

ಬೆಂಗಳೂರು : ನಗರದ ಜನಸಂದಣಿ ಪ್ರದೇಶಗಳು, ಮುಖ್ಯವಾಗಿ ಬಸ್​​ಗಳನ್ನು ಟಾರ್ಗೆಟ್ ಮಾಡಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‌ನ 6 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಳ್ಳರು ಬಳಸುತ್ತಿದ್ದ ಹೈಟೆಕ್ ತಂತ್ರಕ್ಕೆ ಪೊಲೀಸರೇ ಅಚ್ಚರಿಗೊಂಡಿದ್ದು, ಬಂಧಿತರಿಂದ ಬರೋಬ್ಬರಿ 450 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಸ್​​​ಗಳಲ್ಲಿ ಮೊಬೈಲ್ ಕದ್ದು, ಬಳಿಕ ಫೋನ್ ಸ್ವಿಚ್ ಆಫ್ ಮಾಡದೇ ಸಿಮ್ ನೆಟ್‌ವರ್ಕ್ ಕಡಿತಗೊಳಿಸಲು ಈ ಖತರ್ನಾಕ್ ಕಳ್ಳರು ವಿಶಿಷ್ಟ ವಿಧಾನ ಅನುಸರಿಸುತ್ತಿದ್ದರು. ಸಾಮಾನ್ಯವಾಗಿ ಫುಡ್ ಪಾರ್ಸಲ್ ಮಾಡಲು ಬಳಸುವ ಅಲ್ಯೂಮಿನಿಯಂ ಫಾಯಿಲ್ ಬಳಸಿ ಅದರಲ್ಲಿ ಕದ್ದ ಮೊಬೈಲ್ ಸುತ್ತಿಡುತ್ತಿದ್ದರು.

ಫಾಯಿಲ್‌ನಲ್ಲಿ ಮೊಬೈಲ್ ಸುತ್ತುವುದರಿಂದ ನೆಟ್​ವರ್ಕ್​ ಸಿಗುವುದಿಲ್ಲ. ಯಾರಾದರೂ ಕದ್ದ ಮೊಬೈಲ್​ಗೆ ರಿಂಗ್ ಮಾಡಿದರೂ ಅದು ‘ನಾಟ್ ರೀಚೇಬಲ್’ ಎಂದು ಬರುತ್ತಿತ್ತು. ಫೋನ್ ಸ್ವಿಚ್ ಆಫ್ ಆಗದ ಕಾರಣ ಜಿಪಿಎಸ್ ಟ್ರ್ಯಾಕ್ ಆಗುವ ಸಾಧ್ಯತೆ ಕಡಿಮೆಯಾಗುತ್ತಿತ್ತು. ಇದರಿಂದ ಪೊಲೀಸರ ಅಥವಾ ಮಾಲೀಕರ ಟ್ರ್ಯಾಕಿಂಗ್ ಪ್ರಯತ್ನ ವಿಫಲಗೊಳಿಸಿ, ಮೊಬೈಲ್ ಮಾರಾಟ ಮಾಡುವುದು ಈ ಗ್ಯಾಂಗ್‌ನ ತಂತ್ರವಾಗಿತ್ತು.

ನಗರದ ಬಸ್ ನಿಲ್ದಾಣಗಳು, ಬಿಎಂಟಿಸಿ ಬಸ್​​ಗಳನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್, ಜನರು ಕಿಕ್ಕಿರಿದಿರುವ ಸಮಯದಲ್ಲಿ ಕಳ್ಳತನ ನಡೆಸುತ್ತಿದ್ದರು. ಇದೀಗ ಅರ್ಬಾಜ್, ಚಂದ್ರಶೇಖರ್, ಅಫ್ರೋಜ್, ಮದನ್, ಶಾಂತಕುಮಾರ್ ಮತ್ತು ಮೊಹಮ್ಮದ್ ಯಾಸಿನ್ ಸೇರಿ ಒಟ್ಟು 6 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ವಿವಿಧ ಕಂಪನಿಗಳ 450 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ಸಂಬಂಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ನಟ ದರ್ಶನ್​ಗೆ ಮತ್ತೆ ಬಿಗ್ ಶಾಕ್ – ಹೆಚ್ಚುವರಿ ಹಾಸಿಗೆ, ದಿಂಬು ನೀಡಲು ನಿರಾಕರಿಸಿ ಕೋರ್ಟ್ ಆದೇಶ!

Btv Kannada
Author: Btv Kannada

Read More