ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಜೈಲು ಪಾಲಾಗಿದ್ದು, ಮಲಗಲು ಹೆಚ್ಚುವರಿ ಹಾಸಿಗೆ ಮತ್ತು ದಿಂಬು ಬೇಕೆಂದು ಮನವಿ ಮಾಡಿದ್ದರು. ಜೈಲಧಿಕಾರಿಗಳು ಹೆಚ್ಚುವರಿ ಹಾಸಿಗೆ-ದಿಂಬು ನೀಡಲು ನಿರಾಕರಿಸಿದ ಕಾರಣ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದರು.
ಕೆಲ ದಿನಗಳ ಹಿಂದೆ ನಡೆದ ವಾದದ ಸಮಯದಲ್ಲಿ ನಟ ದರ್ಶನ್ ಪರ ವಕೀಲರು, ಜೈಲಧಿಕಾರಿಗಳು ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ. ದರ್ಶನ್ ಅವರಿಗೆ ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್ಶೀಟ್ ನೀಡಿಲ್ಲ ಎಂದು ವಾದಿಸಿದ್ದರು. ಅರ್ಜಿಯ ಬಗ್ಗೆ ಹಲವು ಬಾರಿ ವಾದ-ಪ್ರತಿವಾದಗಳು ನಡೆದಿದ್ದವು, ಜೈಲಿಗೆ ಕಾನೂನು ಪ್ರಾಧಿಕಾರ ಸದಸ್ಯರು ಭೇಟಿ ನೀಡಿ ಪರಿಶೀಲನೆಯನ್ನೂ ಮಾಡಿದ್ದರು. ವಾದಗಳನ್ನು ಆಲಿಸಿದ್ದ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದರು. ಇದೀಗ ಕೋರ್ಟ್ ಆದೇಶ ಪ್ರಕಟಿಸಿದೆ.
ಇಂದು ವಿಡಿಯೋ ಕಾನ್ಫ್ರೆನ್ಸ್ ಮೂಲಕ ದರ್ಶನ್ & ಗ್ಯಾಂಗ್ ವಿಚಾರಣೆಗೆ ಹಾಜರಾಗಿದ್ದು, ಇದೀಗ ಕಾನೂನು ಸೇವಾ ಪ್ರಾಧಿಕಾರ ವರದಿ ಸಂಬಂಧ ಕೋರ್ಟ್ ತೀರ್ಪು ನೀಡಿದೆ. ದರ್ಶನ್, ಪವಿತ್ರಾ ಅವರಿಗೆ ತಿಂಗಳಿಗೊಮ್ಮೆ ಚಾದರ್, ಬಟ್ಟೆಗಳನ್ನು ಒದಗಿಸುವಂತೆ ನ್ಯಾಯಾಲಯ ಆದೇಶಿಸಿದೆ. ಆದರೆ ದರ್ಶನ್ ಕೇಳಿದಂತೆ ಹೆಚ್ಚುವರಿ ಹಾಸಿಗೆ, ದಿಂಬು ಹಾಗೂ ಇನ್ನಿತರೆ ಸೌಲಭ್ಯಗಳು ಅವರಿಗೆ ಸಿಕ್ಕಿಲ್ಲ.
ಇನ್ನು ಬೇರೆ ಸೆಲ್ಗೆ ಶಿಫ್ಟ್ ಮಾಡುವ ಆಯ್ಕೆಯನ್ನು ಕೋರ್ಟ್ ಜೈಲಾಧಿಕಾರಿಗಳಿಗೆ ನೀಡಿದೆ. ಇತ್ತ ಶೀಘ್ರ ಸಾಕ್ಷ್ಯ ವಿಚಾರಣೆ ಕೋರಿ ಪ್ರಾಸಿಕ್ಯೂಷನ್ ಪರ ಅರ್ಜಿ ಸಲ್ಲಿಕೆ ಮಾಡಿದ್ದು,
ಸಾಕ್ಷ್ಯ ವಿಚಾರಣೆಗೆ ಎರಡೂ ಕಡೆಯವರು ಸಹಕರಿಸಲು ಕೋರ್ಟ್ ಸೂಚನೆ ನೀಡಿದೆ.
ಇದನ್ನೂ ಓದಿ : ಮಂಡ್ಯದಲ್ಲಿ ಸಾವಿನಲ್ಲೂ ಒಂದಾದ ದಂಪತಿ.. ಒಂದೇ ದಿನ ಗಂಡ – ಹೆಂಡತಿ ಇಬ್ಬರೂ ಸಾವು!







