ಚುನಾವಣೆಗೂ ಮುನ್ನವೇ ಮಂಡ್ಯ ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ಪಾಲು.. 12ರ ಪೈಕಿ ಕಾಂಗ್ರೆಸ್ ಬೆಂಬಲಿತ 8 ಸ್ಥಾನ ಅವಿರೋಧ ಆಯ್ಕೆ!

ಮಂಡ್ಯ : ಮಂಡ್ಯ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ ಪಕ್ಷವು ಬಹುತೇಕ ಸ್ಥಾನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಟ್ಟು 12 ನಿರ್ದೇಶಕರ ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಯಲ್ಲಿ, ಈಗಾಗಲೇ 8 ನಿರ್ದೇಶಕ ಸ್ಥಾನಗಳು ಅವಿರೋಧವಾಗಿ ಕಾಂಗ್ರೆಸ್ ಬೆಂಬಲಿತರ ಪಾಲಾಗಿವೆ. ಈ ಮೂಲಕ ಮಂಡ್ಯ ಡಿಸಿಸಿ ಬ್ಯಾಂಕ್‌ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಸಜ್ಜಾಗಿದೆ.

ಮಂಡ್ಯ ಡಿಸಿಸಿ ಬ್ಯಾಂಕ್‌ಗೆ ಅವಿರೋಧವಾಗಿ ಆಯ್ಕೆಯಾದ ಎಂಟು ನಿರ್ದೇಶಕರು ಸಂಪೂರ್ಣವಾಗಿ ಕಾಂಗ್ರೆಸ್‌ ಬೆಂಬಲಿತರಾಗಿದ್ದಾರೆ. ಪ್ರಮುಖವಾಗಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಸಚಿವ ಎನ್.ಚಲುವರಾಯಸ್ವಾಮಿ ಅವರ ಪುತ್ರ ಸಚಿನ್, ಹಾಗೂ ಪಿ.ಸಂದರ್ಶ, ಬಿ.ಗಿರೀಶ, ಕೆ.ವಿ.ದಿನೇಶ್, ಹೆಚ್. ಅಶೋಕ, ಎ.ವಿಜೇಂದ್ರಮೂರ್ತಿ, ಕೆ.ಸಿ.ಜೋಗಿಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮಾಹಿತಿಯನ್ನು ಚುನಾವಣಾಧಿಕಾರಿ ಎಂ.ಶಿವಮೂರ್ತಿ ಹೇಳಿದ್ದಾರೆ.

ಉಳಿದ 4 ಸ್ಥಾನಗಳಿಗೆ ನವೆಂಬರ್ 2 ರಂದು ಚುನಾವಣೆ ನಡೆಯಲಿದೆ. ಈ ಸ್ಥಾನಗಳು ಮಂಡ್ಯ, ಪಾಂಡವಪುರ, ಹಾಗೂ ಕೆ.ಆರ್.ಪೇಟೆ ತಾಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಗಳಿಗೆ ಸಂಬಂಧಿಸಿವೆ.

ಇನ್ನು, ಮಂಡ್ಯ ಉಪವಿಭಾಗ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕಾನೂನು ಸಮರ ಶುರುವಾಗಿದೆ. ಈ ಕ್ಷೇತ್ರದ ಅಭ್ಯರ್ಥಿ ಸಿ.ಚಲುವರಾಜು ಅವರ ನಾಮಪತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಮಳವಳ್ಳಿಯ ವಿ.ಎಂ.ವಿಶ್ವನಾಥ್ ಅವರು ಹೈಕೋರ್ಟಿನಲ್ಲಿ ರಿಟ್ ಪಿಟಿಷನ್ ಸಲ್ಲಿಸಿ ಕೋರ್ಟ್ ಮೊರೆ ಹೋಗಿದ್ದಾರೆ.

ಬಹುಪಾಲು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಶಾಸಕ ಗಣಿಗ ರವಿಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ್ದಾರೆ.

 

ಇದನ್ನೂ ಓದಿ : ಶೃಂಗೇರಿ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ದರ್ಶನ ಪಡೆದ ತೆಲಂಗಾಣ ಸಿಎಂ – ರೇವಂತ್ ರೆಡ್ಡಿಗೆ ಆಶೀರ್ವದಿಸಿ ರಾಜ್ಯದ ಶಾಂತಿ, ಕ್ಷೇಮಕ್ಕೆ ಶ್ರೀಗಳ ಹಾರೈಕೆ!

Btv Kannada
Author: Btv Kannada

Read More