ಲವ್ವರ್ಗಾಗಿ ಐ-ಫೋನ್ ಕದಿಯುತ್ತಿದ್ದ ಪ್ರೇಮಿ ಅರೆಸ್ಟ್ – ಶೋರೂಮ್ಗಳಿಗೆ ಕನ್ನ ಹಾಕಿದ್ದ 30 ಲಕ್ಷ ಮೌಲ್ಯದ 28 ಮೊಬೈಲ್‌ ಸೀಜ್!

ಬೆಂಗಳೂರು : ಪ್ರೇಯಸಿಯ ಐಷಾರಾಮಿ ಜೀವನದ ಬೇಡಿಕೆಗಳನ್ನು ಈಡೇರಿಸಲು ದುಬಾರಿ ಮೊಬೈಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಯುವಕರು ಹಾಗೂ ಕದ್ದ ಮೊಬೈಲ್‌ಗಳ ಮಾರಾಟದಲ್ಲಿ ಸಹಾಯ ಮಾಡುತ್ತಿದ್ದ ಓರ್ವ ಮಹಿಳೆಯನ್ನು ವರ್ತೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ 28 ಮೊಬೈಲ್‌ಗಳು ಮತ್ತು ಒಂದು ವಾಚ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ವಾರ ಒಂದೇ ರಾತ್ರಿ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಎರಡು ಕ್ರೋಮಾ (Croma) ಶೋರೂಂಗಳನ್ನು ಟಾರ್ಗೆಟ್ ಮಾಡಿ ಕಳ್ಳರು ಕಳ್ಳತನ ಮಾಡಿದ್ದರು. ರಾತ್ರೋ ರಾತ್ರಿ ಶೋರೂಂಗಳ ಶೆಟರ್ ಮುರಿದು ಒಳನುಗ್ಗಿದ್ದ ಆರೋಪಿಗಳು, ಐಫೋನ್ 17 ಸರಣಿ ಸೇರಿದಂತೆ 30ಕ್ಕೂ ಹೆಚ್ಚು ದುಬಾರಿ ಮೊಬೈಲ್‌ಗಳನ್ನು ಕದ್ದು ಪರಾರಿಯಾಗಿದ್ದರು. ಡೋರ್ ಒಡೆದು ಒಳಗೆ ಹೋಗಿ ತುರ್ತು ನಿರ್ಗಮನ ದ್ವಾರದ (Emergency Exit) ಮೂಲಕ ಎಸ್ಕೇಪ್ ಆಗಿದ್ದರು.

ಪೊಲೀಸರ ತನಿಖೆ ವೇಳೆ ಈ ಕಳ್ಳತನದ ಹಿಂದೆ ಆಸಕ್ತಿದಾಯಕ ಅಂಶಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿಗಳಲ್ಲಿ ದಿವಾಸ್ ಕಮಿ, ಆರೋಹನ್ ತಾಪಾ ಮತ್ತು ಅಸ್ಮಿತಾ ಎಂಬಾಕೆ ಸೇರಿದ್ದಾರೆ. ದಿವಾಸ್ ಕಮಿ ಮತ್ತು ಆರೋಹನ್ ತಾಪಾ ಇಬ್ಬರು ಸೇರಿ ಕ್ರೋಮಾ ಶೋರೂಂಗಳಲ್ಲೇ ಕಳ್ಳತನ ಮಾಡಿದ್ದರು.

ಬಂಧಿತ ಆರೋಪಿ ಅಸ್ಮಿತಾ ತನ್ನ ಪತಿಯನ್ನು ಬಿಟ್ಟು ಕಳ್ಳ ದಿವಾಸ್ ಕಮಿಯೊಂದಿಗೆ ‘ಲಿವಿಂಗ್ ಇನ್ ರಿಲೇಷನ್‌ಶಿಪ್’ನಲ್ಲಿದ್ದಳು. ಪ್ರಿಯಕರ ದಿವಾಸ್, ತನ್ನ ಪ್ರೇಯಸಿ ಅಸ್ಮಿತಾಳ ದುಬಾರಿ ಬೇಡಿಕೆಗಳನ್ನು ಈಡೇರಿಸಲು ಹಾಗೂ ಆಕೆಯೊಂದಿಗೆ ಐಷಾರಾಮಿ ಜೀವನ ನಡೆಸಲು ಈ ಕಳ್ಳತನಗಳನ್ನು ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕಳ್ಳತನ ಮಾಡಿ ತಂದ ದುಬಾರಿ ಮೊಬೈಲ್‌ಗಳನ್ನು ಮಾರಾಟ ಮಾಡುವ ಜವಾಬ್ದಾರಿಯನ್ನು ಆರೋಪಿ ಅಸ್ಮಿತಾ ನಿರ್ವಹಿಸುತ್ತಿದ್ದಳು.

ವರ್ತೂರು ಪೊಲೀಸರು ಸಿಸಿಟಿವಿ ದೃಶ್ಯಗಳು ಮತ್ತು ಇತರೆ ಸುಳಿವುಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 30 ಲಕ್ಷ ರೂಪಾಯಿ ಮೌಲ್ಯದ 28 ಮೊಬೈಲ್‌ಗಳು ಮತ್ತು ಒಂದು ವಾಚ್ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ಟೆಂಡರ್ ಕೆಲಸಕ್ಕಾಗಿ ಹೂವಿನಹಡಗಲಿಗೆ ಬಂದಿದ್ದ ಗುತ್ತಿಗೆದಾರ ಸೂಸೈಡ್ – ಲಾಡ್ಜ್‌ನಲ್ಲಿ ಹುಬ್ಬಳ್ಳಿಯ ಉದ್ಯಮಿ ಆನಂದ್ ಆತ್ಮಹತ್ಯೆ!

Btv Kannada
Author: Btv Kannada

Read More