ಕುಡಿದ ಮತ್ತಲ್ಲಿ ತಾಯಿಗೆ ಬೈದಿದ್ದಕ್ಕೆ ಸಂಬಂಧಿ ಕಗ್ಗೊಲೆ -ಕಬ್ಬಿಣದ ರಾಡ್ನಿಂದ ಅವಿನಾಶ್ ಕೊಲೆ ಮಾಡಿದ ಕಾರ್ತಿಕ್!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ತಾಯಿಗೆ ಅವಾಚ್ಯವಾಗಿ ಬೈದಿದ್ದಕ್ಕೆ ಸಂಬಂಧಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ.

 

ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಈ ಕೊಲೆ ನಡೆದಿದೆ. ಬೆಂಗಳೂರಿನ ಉಲ್ಲಾಳ ಉಪನಗರದ ರಾಮಚಂದ್ರಪ್ಪ ಲೇಔಟ್ನಲ್ಲಿ ಈ ಘಟನೆ ವರದಿಯಾಗಿದೆ. ಕೊಲೆಯಾದ ಯುವಕನನ್ನು 36 ವರ್ಷದ ಅವಿನಾಶ್ ಎಂದು ಗುರುತಿಸಲಾಗಿದೆ. ಆತನನ್ನು ಕೊಲೆ ಮಾಡಿದ ಆರೋಪಿ ಕಾರ್ತಿಕ್.

ಕೊಲೆಯಾದ ಅವಿನಾಶ್ ಕುಡಿದು ಮನೆಗೆ ಬಂದಿದ್ದ. ಈ ವೇಳೆ ಆತ ಕಾರ್ತಿಕ್ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು, ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ. ಇದರಿಂದ ತೀವ್ರವಾಗಿ ಕುಪಿತಗೊಂಡ ಕಾರ್ತಿಕ್, ಜಗಳ ವಿಕೋಪಕ್ಕೆ ಹೋಗಿ ತನ್ನ ಸಂಬಂಧಿ ಅವಿನಾಶ್‌ನನ್ನು ಕೊಲೆ ಮಾಡಿದ್ದಾನೆ. ಆರೋಪಿ ಕಾರ್ತಿಕ್, ಬೈಕ್‌ನ ಕಬ್ಬಿಣದ ಕ್ರಾಸ್ ಗಾರ್ಡ್ ರಾಡ್ ಅನ್ನು ಬಳಸಿ ಅವಿನಾಶ್ ತಲೆಗೆ ಮತ್ತು ಬೆನ್ನಿಗೆ ಮಾರಣಾಂತಿಕವಾಗಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಅವಿನಾಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಜ್ಞಾನಭಾರತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಕಾರ್ತಿಕ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಇವತ್ತಿನಿಂದಲೇ ಪೊಲೀಸ್ ಇಲಾಖೆಗೆ ಹೊಸ ಸ್ಪರ್ಶ.. ಹಳೇ ‘ಸ್ಲೋಚ್ ಕ್ಯಾಪ್’ ಬದಲು ಹೊಸ ‘ಪೀಕ್ ಕ್ಯಾಪ್’.. ಸಿಎಂ ಸಿದ್ದು ಚಾಲನೆ!

Btv Kannada
Author: Btv Kannada

Read More