ಪುತ್ತೂರು : ಪ್ರಚೋದನಕಾರಿ ಭಾಷಣ ಆರೋಪದಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿಂದೂ ನಾಯಕ ಮತ್ತು ಆರ್ಎಸ್ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಪುತ್ತೂರು ನ್ಯಾಯಾಲಯದಿಂದ ತಾತ್ಕಾಲಿಕ ನಿರಾಳತೆ ದೊರೆತಿದೆ. ಭಟ್ ಅವರ ವಿರುದ್ಧ ಮುಂದಿನ ವಿಚಾರಣೆವರೆಗೆ ಯಾವುದೇ ಬಂಧನ ಸಹಿತ ಬಲವಂತದ ಕ್ರಮ ಕೈಗೊಳ್ಳದಂತೆ ಪುತ್ತೂರು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಆದೇಶ ನೀಡಿದೆ.

ಕಳೆದ ಅಕ್ಟೋಬರ್ 20ರಂದು ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಭಾಷಣ ಮಾಡಿದ್ದರು. ಈ ಭಾಷಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಈಶ್ವರಿ ಪದ್ಮುಂಜ ಎಂಬುವವರು ದೂರು ನೀಡಿದ್ದರು. ಈ ದೂರಿನನ್ವಯ ಪ್ರಭಾಕರ ಭಟ್ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಐಪಿಸಿ ಸೆಕ್ಷನ್ಗಳಾದ 79, 196, 299, 302 ಹಾಗೂ 3(5) ಕಲಂಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಭಟ್ಗೆ ನೋಟಿಸ್ ಜಾರಿಗೊಳಿಸಿದ್ದರು.

ಪೊಲೀಸರ ಎಫ್ಐಆರ್ ಮತ್ತು ನೋಟಿಸ್ ಪ್ರಶ್ನಿಸಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ತಮ್ಮ ವಿರುದ್ಧದ ಎಫ್ಐಆರ್ ‘ದ್ವೇಷಪೂರಿತ’ ಎಂದು ಅವರು ವಾದಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ, ಅಕ್ಟೋಬರ್ 29 ರಂದು ನಡೆಯಲಿರುವ ಮುಂದಿನ ವಿಚಾರಣೆವರೆಗೆ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಮಹತ್ವದ ಸೂಚನೆ ನೀಡಿದೆ. ಇದರಿಂದಾಗಿ ಅಕ್ಟೋಬರ್ 29ರವರೆಗೆ ಭಟ್ ಅವರಿಗೆ ಬಂಧನದ ಭೀತಿಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಇದನ್ನೂ ಓದಿ : ‘ಪ್ರಿಯಾಂಕ್ ಖರ್ಗೆ ಫಸ್ಟ್ ಕ್ಲಾಸ್ ಈಡಿಯಟ್’.. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಆಕ್ರೋಶ!







