ಕರ್ನಾಟಕದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಶಾನ್ಯ ರಾಜ್ಯ ಅಸ್ಸಾಂ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ. ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಖರ್ಗೆ ಅವರನ್ನು ‘ಫಸ್ಟ್ ಕ್ಲಾಸ್ ಇಡಿಯಟ್’ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಗುಜರಾತ್ ಮತ್ತು ಅಸ್ಸಾಂನಲ್ಲಿ ಘೋಷಿಸಿದ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಸಂದರ್ಶನವೊಂದರಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈಶಾನ್ಯ ರಾಜ್ಯಗಳಾದ ಅಸ್ಸಾಂನಲ್ಲಿ ಸೆಮಿಕಂಡಕ್ಟರ್ನಂತಹ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲು ಸೂಕ್ತ ಕೌಶಲ್ಯದ ವ್ಯವಸ್ಥೆ, ಸಂಶೋಧನಾ ಪರಿಸರ ವ್ಯವಸ್ಥೆ ಅಥವಾ ನಾವೀನ್ಯತೆಯ ಪರಿಸರ ವ್ಯವಸ್ಥೆ (Ecosystem) ಇಲ್ಲ. ಅಲ್ಲಿ ಪ್ರತಿಭಾವಂತ ಮತ್ತು ಸಮರ್ಥ ಯುವಕ-ಯುವತಿಯರ ಕೊರತೆ ಇದೆ ಎಂದು ಪ್ರಿಯಾಂಕ್ ಖರ್ಗೆ ಅವರು ಹೇಳಿಕೆ ನೀಡಿದ್ದರು.
ಶೇ.70 ರಷ್ಟು ಚಿಪ್ ಡಿಸೈನಿಂಗ್ ಪ್ರತಿಭೆಗಳು ಕರ್ನಾಟಕದಲ್ಲಿ ಇರುವಾಗ, ಕೇಂದ್ರವು ರಾಜಕೀಯ ಪ್ರಭಾವದಿಂದ ಹೂಡಿಕೆಯನ್ನು ಬೇರೆ ರಾಜ್ಯಗಳತ್ತ ತಿರುಗಿಸುತ್ತಿದೆ. ಇದು ‘ಅನ್ಯಾಯ’ ಎಂದು ಖರ್ಗೆ ದೂರಿದ್ದರು.

ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತೀವ್ರವಾಗಿ ಖಂಡಿಸಿದ್ದಾರೆ. ‘ಪ್ರಿಯಾಂಕ್ ಖರ್ಗೆ ಫಸ್ಟ್ ಕ್ಲಾಸ್ ಇಡಿಯಟ್‘ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ. ಖರ್ಗೆ ಅವರು ಅಸ್ಸಾಂನ ಯುವಕರನ್ನು ಅವಮಾನಿಸಿದ್ದಾರೆ. ಇದು ಕಾಂಗ್ರೆಸ್ನ ಅಹಂಕಾರ ಮತ್ತು ಅಜ್ಞಾನವನ್ನು ತೋರಿಸುತ್ತದೆ ಎಂದು ಶರ್ಮಾ ಕಿಡಿಕಾರಿದ್ದಾರೆ. ಈ ಹೇಳಿಕೆ ಅಸ್ಸಾಂನ ಯುವಜನತೆಗೆ ಮಾಡಿದ ಅಪಮಾನ ಎಂದು ಹೇಳಿ, ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆಯೂ ತಮ್ಮ ಸರ್ಕಾರ ಪರಿಶೀಲಿಸುತ್ತಿದೆ ಎಂದು ಸಿಎಂ ಶರ್ಮಾ ಎಚ್ಚರಿಕೆ ನೀಡಿದ್ದಾರೆ.
ಈ ವಿವಾದವು ಕರ್ನಾಟಕ ಮತ್ತು ಅಸ್ಸಾಂ ರಾಜಕಾರಣಿಗಳ ನಡುವೆ ದೊಡ್ಡ ವಾಕ್ಸಮರಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಕೂಡ ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ರಾಜ್ಯದ ಹೆಮ್ಮೆಗೆ ಮಾಡಿದ ‘ಗಂಭೀರ ಅವಮಾನ’ ಎಂದು ಖಂಡಿಸಿದ್ದಾರೆ. ಕಾಂಗ್ರೆಸ್ ಈ ಹೇಳಿಕೆಯನ್ನು ಖಂಡಿಸದಿರುವ ಬಗ್ಗೆಯೂ ಅಸ್ಸಾಂ ಸಿಎಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಪಡೆಯದೇ ಪ್ರತಿಭಟನೆ – ಪೊಲೀಸರಿಗೆ ಧಮ್ಕಿ ಹಾಕಿದ CPI (M) ಕಾರ್ಯಕರ್ತರ ಮೇಲೆ FIR!







