ನೂರಾರು ಎಕರೆ ಭೂಮಿ ಕಬಳಿಕೆ: ಶಾಮನೂರು ಕುಟುಂಬದ ವಿರುದ್ಧ ಬಿಜೆಪಿ‌ ಶಾಸಕ ಬಿ.ಪಿ. ಹರೀಶ್ ಗಂಭೀರ ಆರೋಪ!

ದಾವಣಗೆರೆ : ದಾವಣಗೆರೆ ಜಿಲ್ಲೆಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸುವಂತಹ ಘಟನೆ ನಡೆದಿದೆ. ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರು ಕಾಂಗ್ರೆಸ್‌ನ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ವಿರುದ್ಧ ನೂರಾರು ಎಕರೆ ಸರ್ಕಾರಿ ಭೂಮಿ ಕಬಳಿಕೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.

ಶಾಸಕ ಬಿ.ಪಿ. ಹರೀಶ್ ಅವರು ಪತ್ರಿಕಾಗೋಷ್ಠಿ ನಡೆಸಿ ಈ ಸ್ಫೋಟಕ ಆರೋಪ ಮಾಡಿದ್ದಾರೆ. ದಾವಣಗೆರೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶಾಮನೂರು ಕುಟುಂಬವು ರಾಜಕೀಯ ಪ್ರಭಾವ ಬಳಸಿ ನೂರಾರು ಎಕರೆಗಳಷ್ಟು ಸರ್ಕಾರಿ ಜಮೀನು, ಗೋಮಾಳ ಮತ್ತು ಸಾರ್ವಜನಿಕ ಆಸ್ತಿಗಳನ್ನು ಕಾನೂನುಬಾಹಿರವಾಗಿ ಒತ್ತುವರಿ ಮಾಡಿಕೊಂಡಿದೆ ಎಂದು ಹೇಳಿದ್ದಾರೆ. ಈ ಭೂ ಕಬಳಿಕೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ರಾಜಕಾರಣಿಗಳ ಬಗ್ಗೆಯೂ ತನಿಖೆಯಾಗಬೇಕು ಎಂದು ಬಿ.ಪಿ. ಹರೀಶ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ‌ ಶಾಸಕ ಬಿ.ಪಿ.ಹರೀಶ್​, ಭೂಮಿ ಕಬಳಿಕೆ ಬಗ್ಗೆ ನಾನು ಸದನದಲ್ಲೂ ಮಾತಾಡಿದ್ದೇನೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ್ದೇನೆ. ಅದೇ ದೂರಿನ ಅನ್ವಯ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ದೇಶದಲ್ಲಿ ಸರ್ವೆ ಮಾಡಲು ಆದೇಶವಾಗಿದೆ.

ಅ. 27ಕ್ಕೆ ಸರ್ವೆ ಇಲಾಖೆ ಜಂಟಿ ನಿರ್ದೇಶಕರ ನೇತ್ರತ್ವದಲ್ಲಿ ಮರು ಸರ್ವೆ ನಡೆಯಲಿದೆ. ಹೀಗೆ ಸರ್ವೆ ಅಧಿಕಾರಿಗಳು ಬರುತ್ತಾರೆ ಎಂದು ಗೊತ್ತಾಗಿದ್ದೇ ತಡ ನಿನ್ನೆ ರಾತ್ರಿ ಹಳ್ಳ ಸರಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೆ ನಾನು ಇವರನ್ನ ಬಿಡಲ್ಲ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಕಂದಾಯ ಸಚಿವರಿದ್ದಾಗ ಶಾಮನೂರ ಗ್ರಾಮದ ಜಮೀನು ಕಬಳಿಸಲು ಇದೇ ಶಾಮನೂರು ಕುಟುಂಬ ಮುಂದಾಗಿತ್ತು. ಆಗಲು ಹೋರಾಟ ನಡೆಸಿ ರೈತರ ಭೂಮಿ ಉಳಿಸಿದ್ದೇ, ಈಗಲೂ ಹೋರಾಟ ಮಾಡಿ ರೈತರ ಭೂಮಿ ಉಳಿಸುವೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದ್ದಾರೆ.

ಪಾಪ ದಿನೇಶ್​ ಶೆಟ್ಟಿ ಶಾಮನೂರ ಕುಟುಂಬದ ಸೇವೆ ಮಾಡಿ ಮಾಡಿ ಈಗ ಪ್ರಾಧಿಕಾರದ ಅಧ್ಯಕ್ಷ ಆಗಿದ್ದಾರೆ. ನಾನು ಹುಚ್ಚುನಾಯಿ ಕಡಿದವರನಂತೆ ಆಡುತ್ತೇನೆ. ಆ ಹುಚ್ಚುನಾಯಿ ಜಿಲ್ಲಾ ಉಸ್ತುವಾರಿ ಸಚಿವ ಎಸ್​ಎಸ್‌ ಮಲ್ಲಿಕಾರ್ಜುನ ಅಥವಾ ಮತ್ಯಾರು ಅಂತಾ ಕಾಂಗ್ರೆಸ್ ನಾಯಕರೇ ಹೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಟಿಪ್ಪರ್-ಕಾರು ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು – ಸ್ಥಳೀಯರಿಂದ ಭಾರೀ ಆಕ್ರೋಶ!

Btv Kannada
Author: Btv Kannada

Read More