ಟಿಪ್ಪರ್-ಕಾರು ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು – ಸ್ಥಳೀಯರಿಂದ ಭಾರೀ ಆಕ್ರೋಶ!

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಮಾದಾಪಟ್ಟಣ ಬೌಂಡ್ರಿ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲ್ಲು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್‌ಗೆ, ಮೈಸೂರಿನಿಂದ ಕೇರಳದ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರ ಗುರುತು  ತಿಳಿದುಬರಬೇಕಿದೆ. ಮೃತ ದೇಹಗಳು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಅಪಘಾತದ ತೀವ್ರತೆಗೆ ಸಾಕ್ಷಿಯಾಗಿದೆ.

ಈ ಅಪಘಾತಕ್ಕೆ ಈ ಭಾಗದಲ್ಲಿ ನಡೆಯುತ್ತಿರುವ ಟಿಪ್ಪರ್ ವಾಹನಗಳ ಅತಿಯಾದ ಮತ್ತು ಅಜಾಗರೂಕ ಚಾಲನೆಯೇ ಕಾರಣ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಟಿಪ್ಪರ್ ಹಾವಳಿಯನ್ನು ನಿಯಂತ್ರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಬೇಗೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಪ್ರದೇಶದಲ್ಲಿ ಟಿಪ್ಪರ್ ಸಂಚಾರಕ್ಕೆ ನಿರ್ಬಂಧ ಹೇರುವ ಕುರಿತು ಸ್ಥಳೀಯರ ಬೇಡಿಕೆಗೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : KSCPCR ಅಧ್ಯಕ್ಷ ಕೆ. ನಾಗಣ್ಣಗೌಡರ 3 ವರ್ಷಗಳ ಅವಧಿ ಮುಕ್ತಾಯ – ರಾಜ್ಯ ಸರ್ಕಾರದಿಂದ ಬಿಡುಗಡೆ ಆದೇಶ!

Btv Kannada
Author: Btv Kannada

Read More