ವಿಜಯಪುರ : ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಹಾಡಹಗಲೇ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪತಿ-ಪತ್ನಿ ಇಬ್ಬರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಸಿಂದಗಿ ಪಟ್ಟಣದ ಸಂಗಮ ಬಾರ್ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಪಾಪಿ ಪತಿಯು ಕ್ಷುಲ್ಲಕ ಜಮೀನು ವಿವಾದದ ಕಾರಣಕ್ಕೆ ತನ್ನ ಪತ್ನಿಯ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ರಸ್ತೆಯಲ್ಲೇ ಆತಂಕದ ವಾತಾವರಣ ಸೃಷ್ಟಿಸಿದ ಪತಿಯು, ಪತ್ನಿಯನ್ನು ಅಟ್ಟಾಡಿಸಿ ಹಲ್ಲೆ ನಡೆಸಿದ್ದಾನೆ. ಹಲ್ಲೆಕೋರ ಪತಿಯು ಹಲ್ಲೆ ಮಾಡುವ ವೇಳೆ ಅದನ್ನು ಬಿಡಿಸಲು ಬಂದ ಸ್ಥಳೀಯ ಸಾರ್ವಜನಿಕರಿಗೂ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾನೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಗುಂಪು ಸೇರಿ ಆ ಹಲ್ಲೆಕೋರನ ತಲೆಗೆ ಡೊಣ್ಣೆಯಿಂದ ಹೊಡೆದುರುಳಿಸಿದ್ದಾರೆ.

ಈ ಘಟನೆಯಲ್ಲಿ ಪತ್ನಿಯ ಮೈಮೇಲೆ ಹಲವಾರು ಕಡೆ ಮಾರಣಾಂತಿಕ ಗಾಯಗಳಾಗಿದ್ದರೆ, ಸಾರ್ವಜನಿಕರ ಪ್ರತಿದಾಳಿಯಿಂದ ಪತಿಯ ಸ್ಥಿತಿಯೂ ಗಂಭೀರವಾಗಿದೆ. ಇಬ್ಬರನ್ನೂ ತಕ್ಷಣವೇ ಸಿಂದಗಿ ತಾಲೂಕಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆಗೆ ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಘಟನೆ ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಮುಂದಾಗಿದ್ದ RSSಗೆ ನಿರಾಸೆ – ಅಂತಿಮ ತೀರ್ಪು ಅ.30ಕ್ಕೆ.. ಶಾಂತಿ ಸಭೆ ನಡೆಸಲು ಹೈಕೋರ್ಟ್ ಸೂಚನೆ!







