ಕೊಬ್ಬಿನ ಮತ್ತು ದುರಹಂಕಾರದ ಜಾಹ್ನವಿ ಅವರನ್ನು ಬಿಗ್​ಬಾಸ್ ಇಂದ ಹೊರಹಾಕಿ!

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ಆರಂಭವಾಗಿ 3 ವಾರಗಳು ಕಳೆದಿವೆ. ಅಷ್ಟರಲ್ಲಾಗಲೇ 4 ಮಂದಿ ಎಲಿಮಿನೇಟ್ ಆಗಿದ್ದಾರೆ. ಈ ವಾರ ಮಿಡ್ ಸೀಸನ್ ಫಿನಾಲೆ ನಡೆಯುತ್ತಿದ್ದು, ನಿನ್ನೆಯ ಸಂಚಿಕೆಯಲ್ಲಿ ರಕ್ಷಿತಾ ಶೆಟ್ಟಿಗೆ ನೋವಾಗುವಂತೆ ನಡೆದುಕೊಂಡಿದ್ದಕ್ಕೆ ಕಿಚ್ಚ ಸುದೀಪ್, ಜಾಹ್ನವಿಯ ಮೈಚಳಿ ಬಿಡಿಸಿದ್ದಾರೆ. ಕಿಚ್ಚ ಸುದೀಪ್‌ ಅವರು ತಿಳಿಹೇಳಿದ ಬಳಿಕವೂ ಜಾಹ್ನವಿ ಅವರು ನಗುತ್ತಲೇ ಇದ್ದರು.

ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗಿದ್ದು, ಜಾಹ್ನವಿ ಅವರಿಗೆ ಅಹಂಕಾರ ಜಾಸ್ತಿ, ಕಿಚ್ಚ ಸುದೀಪ್‌ ಬುದ್ಧಿ ಹೇಳಿದ್ದರೂ ಕೂಡ ನಗುತ್ತಿದ್ದರು. ಬುದ್ಧಿಯೇ ಬಂದಿಲ್ಲ ಎಂದು ಕೂಡ ಕಾಮೆಂಟ್‌ ಮಾಡಲಾಗುತ್ತಿದೆ. ಈ ಹಿಂದೆ ಜಾಹ್ನವಿ ಕೆಲವು ಸ್ಪರ್ಧಿಗಳೊಂದಿಗೆ ಮಾತುಕತೆ ಮಾಡುವಾಗ ದುರಹಂಕಾರ ತೋರಿಸಿದ್ದರು, ಇದಕ್ಕೆ ನೆಟ್ಟಿಗರು ಟೀಕಿಸಿದ್ದಾರೆ. ಸಹ ಸ್ಪರ್ಧಿಗಳ ಭಾವನೆಗಳಿಗೆ ಬೆಲೆ ಕೊಡದಿರುವುದು, ಮತ್ತು ತಾವು ಮಾಡಿದ್ದು ಸರಿ ಎಂದು ವಾದಿಸಿದ್ದಕ್ಕೆ ಜಾಹ್ನವಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಈ ವಾರ ರಕ್ಷಿತಾ ಶೆಟ್ಟಿ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಲು ಜಾಹ್ನವಿ ಪ್ರಯತ್ನಿಸಿದರು. ಮಧ್ಯರಾತ್ರಿ ತಾವೇ ಬೇಕಂತಲೇ ಗೆಜ್ಜೆ ಶಬ್ದ ಮಾಡಿ, ನಂತರ ಅದನ್ನು ರಕ್ಷಿತಾ ಶೆಟ್ಟಿ ಮೇಲೆ ಹೊರಿಸಲು ಯತ್ನಿಸಿದರು. ಅದನ್ನು ವಿರೋಧಿಸಿದ ರಕ್ಷಿತಾ ಶೆಟ್ಟಿ ವಿರುದ್ಧ ಜಾಹ್ನವಿ ನಾಲಿಗೆ ಹರಿಬಿಟ್ಟಿದ್ದರು. ಈ ಘಟನೆಯಿಂದ ರಕ್ಷಿತಾ ಶೆಟ್ಟಿ ಅವರಿಗೆ ಬಹಳ ನೋವಾಗಿ ಅಳುತ್ತಾ ಮಲಗಿದ್ದರು. ಇದನ್ನು ನೋಡಿ ಜಾಹ್ನವಿ ಮಜಾ ತೆಗೆದುಕೊಂಡಿದ್ದರು.

ನಿನ್ನೆ ಕಿಚ್ಚ ಸುದೀಪ್ ಅವರು ಈ ಘಟನೆಯನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರು. ಆದರೂ ಜಾಹ್ನವಿ ಮೊಂಡುವಾದ ಮಾಡಿದರು. ಸುದೀಪ್ ಅವರು ಅಷ್ಟೆಲ್ಲಾ ಬೈಯ್ದ ಮೇಲೂ ಕಿಂಚಿತ್ತೂ ಕೂಡ ಪಶ್ಚಾತ್ತಾಪ ಇಲ್ಲದೇ ಜಾಹ್ನವಿ ಅವರು ನಗುತ್ತಿರುವುದು ಸ್ಟೋರ್ ರೂಮ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ಕಂಡು ಸುದೀಪ್ ಅವರು ಮತ್ತೆ ಕ್ಲಾಸ್ ತೆಗೆದುಕೊಂಡರು. ಒಟ್ಟಾರೆ ಈ ಘಟನೆಯಿಂದ ವೀಕ್ಷಕರ ಎದುರಲ್ಲಿ ಜಾಹ್ನವಿ ಅವರ ಮುಖವಾಡ ಕಳಚಿದೆ.

ಇದೀಗ ಗಾಂಚಾಲಿ ತೋರಿಸಿದ ಜಾಹ್ನವಿ ವಿರುದ್ಧ ವೀಕ್ಷಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಜಾಹ್ನವಿಯನ್ನು ತಕ್ಷಣವೇ ಬಿಗ್​ಬಾಸ್​ನಿಂದ ಹೊರಹಾಕುವಂತೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ : ದೀಪಾವಳಿಗೆ ಮನೆ ಬಾಗಿಲಲ್ಲಿ ಹಚ್ಚಿದ್ದ ದೀಪದಿಂದ ಅಗ್ನಿ ಅವಘಡ – 7 ಜನರಿಗೆ ಗಂಭೀರ ಗಾಯ, ಮನೆ ಸುಟ್ಟು ಕರಕಲು!

Btv Kannada
Author: Btv Kannada

Read More