ಬೆಂಗಳೂರು : ಸರ್.. ಕೈ ಹಾಗೂ ಕತ್ತಲ್ಲಿರೋ ಎಲ್ಲಾ ಚಿನ್ನಾಭರಣವನ್ನ ಕಿತ್ಕೊಂಡ್ ಹೋಗಿ. ಆದ್ರೆ, ಉಂಗುರದ ಬೆರಳಲ್ಲಿರೋ ಈ ಉಂಗುರವನ್ನ ಮಾತ್ರ ಮುಟ್ಬೇಡಿ ಅಂದಿದ್ದನಷ್ಟೇ. ಆದ್ರೆ, ಆ ದರೋಡೆಕೋರರ ಟೀಂ ಎಂಗೇಜ್ಮೆಂಟ್ ರಿಂಗನ್ನೂ ಹೊತ್ತೋಯ್ಯೋಕೆ ಮುಂದಾಯ್ತು. ಅಷ್ಟೇ, ದರೋಡೆಕೋರರ ನಸೀಬು ಖರಾಬಾಗೋಕೆ ಆ ಒಂದು ಉಂಗುರದ ವಿಚಾರವೇ ಕಾರಣವಾಗೋಯ್ತು. ರಾಬರಿ ಟೀಮ್ ಗೆ ಮುಖಾ-ಮೂತಿ ನೋಡ್ದೇ ಚಚ್ಚೋಕೆ ಶುರುಮಾಡಿ ಹಣ್ಣುಗಾಯಿ ನೀರುಗಾಯಿ ಮಾಡೇಬಿಟ್ಟ.
ಹೌದು, ನಿನ್ನೆ ತಡರಾತ್ರಿ ಬೆಂಗಳೂರಿನ HSR ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರೋದು. HSR ಲೇಔಟ್ ನ 19ನೇ ಮುಖ್ಯರಸ್ತೆಯ ಮನೆಯೊಂದರ ಬಳಿ ನೇಪಾಳ ಮೂಲದ ದಿನೇಶ್ ತಾಪಾ ಹಾಗೂ ಏಳೆಂಟು ಮಂದಿ ಮಾತಾಡ್ತಾ ಕೂತಿದ್ದರು. ದೀಪಾವಳಿ ವೇಳೆ ಇಸ್ಪೀಟ್ ಆಡೋಣ ಕಾಸು ಕಟ್ಟೋರು ಯಾರ್ಯಾರು ಅನ್ನೋ ವಿಚಾರಗಳು ಡಿಸ್ಕಸ್ ಆಗ್ತಿದ್ವು. ಇದೇ ವೇಳೆ ಅಲ್ಲಿಗೆ ಮುಸುಕನ್ನ ಧರಿಸ್ಕೊಂಡು ಕೈಯಲ್ಲಿ ಮಚ್ಚಿಡಿದು ಬಂದ ದರೋಡೆಕೋರರು, ಮಾತನಾಡ್ತಿದ್ದ ಇಡೀ ಟೀಮನ್ನ ರೌಂಡಪ್ ಮಾಡಿಕೊಳ್ಳುತ್ತೆ. ನಂತರ ಪ್ರತಿಯೊಬ್ಬರ ಕತ್ತಿಗೂ ಮಚ್ಚಿಡಿದು ಚಿನ್ನದ ಸರ ಹಾಗೂ ನಗದನ್ನ ಕಿತ್ತುಕೊಂಡು ಆಟಾಟೋಪ ಮೆರೆಯೋಕೆ ಶುರುಮಾಡುತ್ತೆ. ಇದೇ ಟೈಮಲ್ಲಿ ರಾಬರಿ ಗ್ಯಾಂಗ್ ನ ಒಬ್ಬ ಸದಸ್ಯ ಸುಮ್ಮನೆ ಕೂತಿದ್ದ ದಿನೇಶ್ ತಾಪಾನ ಕೈಲಿದ್ದ ಉಂಗುರವನ್ನ ಬಿಚ್ಚಿಸಿಕೊಳ್ಳೋಕೆ ಮುಂದಾಗ್ತಾನೆ. ಆಗ ದಿನೇಶ್ ನಂದು ಎಂಗೇಜ್ಮೆಂಟ್ ರಿಂಗದು ಬಿಟ್ಬಿಡಿ ಸರ್.. ಎಂಗೇಜ್ಮೆಂಟ್ ಆಗಿ 15 ದಿನ ಆಗಿದ್ದಷ್ಟೇ ಸೆಂಟಿಮೆಂಟು ಸರ್.. ಸೆಂಟಿಮೆಂಟು ಅಂತ ಗೋಗರೆದಿದ್ದ. ಆದ್ರೆ ಮಾತನ್ನ ಕೇಳದ ದರೋಡೆಕೋರ ಉಂಗುರವನ್ನ ಕೂಡ ಬಿಚ್ಚಿಸಿಕೊಳ್ಳೋಕೆ ರೆಡಿಯಾಗ್ತಾನೆ.
ಆಗ ಶುರುವಾಯ್ತು ನೋಡಿ ಮಾರಾಮಾರಿ.. ಪಕ್ಕದಲ್ಲೇ ಇದ್ದ ಬಿಂದಿಗೆಯನ್ನ ಎತ್ಕೊಂಡ ದಿನೇಶ ದರೋಡೆಕೋರರ ಬುರುಡೆ ಬಿಚ್ಚೋಕೆ ಶುರುಮಾಡ್ತಾನೆ. ಇದನ್ನ ನೋಡ್ತಿದ್ದ ದಿನೇಶನ ಸಹಪಾಠಿಗಳು ಕೈಗೆ ಸಿಕ್ಕ ಪಾತ್ರೆಗಳನ್ನ ಎತ್ಕೊಂಡು ಇಡೀ ರಾಬರಿ ಗ್ಯಾಂಗ್ ಗೆ ಕಜ್ಜಾಯ ಕೊಡೋಕೆ ಶುರುಮಾಡುತ್ತೆ. ಕಣ್ ಮಿಟುಕಿಸಿ ಕಣ್ ಬಿಡೋದ್ರಲ್ಲಿ ದರೋಡೆಕೋರರ ಗ್ಯಾಂಗ್ ನ ಇಬ್ಬರು ಸದಸ್ಯರು ಮಕಾಡೆ ಮಲಗೇಬಿಟ್ಟಿದ್ದರು. ಇದನ್ನ ನೋಡ್ತಿದ್ದ ರಾಬರಿ ಗ್ಯಾಂಗ್ ಸೈಲೆಂಟಾಗೇ ಬದುಕಿದೆಯಾ ಬಡಜೀವಾ ಅಂತ ಕಾಲಿಗೆ ಬುದ್ದಿಹೇಳಿತ್ತು. ಈ ಘಟನೆಯ ಬಳಿಕ HSR ಲೇಔಟ್ ಪೊಲೀಸ್ರು ಸರಿಯಾಗೇ ಮಾಂಜಾ ತಿಂದ ರಾಬರಿ ಟೀಂನ ಹರಿಪ್ರಸಾದ್ ಹಾಗೂ ಅಜಯ್ ಎಂಬವರನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸ್ತಿದ್ದಾರೆ.
ನೋಡಿದ್ರಲ್ಲ, ಪ್ರೀತಿ ಅಮರ ಪ್ರೇಮ ಮಧುರ ಅಂತ ಈ ವಿಚಾರಕ್ಕೆ ಯಾರೇ ಅಡ್ಡಗಾಲು ಹಾಕಿದ್ರೂ ಬಿಡೋ ಮಾತೇ ಇಲ್ಲ.. ಇಲ್ಲೂ ಕೂಡ ದಿನೇಶ್ ತಾಪಾನ ಪ್ರೀತಿಯ ತಾಪ ಕೋಪವಾಗಿ ತಿರುಗಿ ಇಡೀ ರಾಬರಿ ಗ್ಯಾಂಗ್ ಗೇ ಎಳ್ಳುನೀರು ಬಿಡೋ ಕೆಲಸವಾಗಿದ್ದಂತೂ ದಿಟ.
ಇದನ್ನೂ ಓದಿ : ರಿಯಲ್ ಎಸ್ಟೇಟ್ ವಂಚಕರಿಂದ ACPಗೆ 30 ಲಕ್ಷ ಪಂಗನಾಮ!







