ಬೆಂಗಳೂರಿನಲ್ಲಿ ಯುವತಿಯ ಬರ್ಬರ ಕೊಲೆ – ಯಾಮಿನಿ ಹತ್ಯೆಗೆ 6 ತಿಂಗಳ ಹಿಂದೆಯೇ ಪ್ಲ್ಯಾನ್ ಮಾಡಿದ್ದ ಕೀಚಕ.. ತನಿಖೆಯಲ್ಲಿ ಬಯಲು!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ನಡೆದ ಯುವತಿ ಯಾಮಿನಿ ಪ್ರಿಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ಮಾಹಿತಿ ಬೆಳಕಿಗೆ ಬಂದಿದೆ. ಈ ಭೀಕರ ಹತ್ಯೆಯನ್ನು ಆರೋಪಿ ವಿಘ್ನೇಶ್‌ ಸುಮಾರು ಆರು ತಿಂಗಳ ಹಿಂದೆಯೇ ಪ್ಲ್ಯಾನ್ ಮಾಡಿದ್ದ ಅನ್ನೋದು ತನಿಖೆಯಲ್ಲಿ ಬಯಲಾಗಿದೆ.

ಯುವತಿ ಯಾಮಿನಿ ಪ್ರಿಯಾ ಅವರನ್ನು ಕೊಲ್ಲಲು ಆರೋಪಿ ವಿಘ್ನೇಶ್‌, ಆರು ತಿಂಗಳ ಹಿಂದೆಯೇ ‘ಮಿಷನ್ ಯಾಮಿನಿ ಪ್ರಿಯಾ’ ಹೆಸರಿನ ವಾಟ್ಸಪ್ ಗ್ರೂಪ್ ರಚಿಸಿದ್ದ. ಈ ಗ್ರೂಪ್ ಮೂಲಕ ಆತ ತನ್ನ ಕೆಟ್ಟ ಪ್ಲಾನ್ ಸಿದ್ಧಪಡಿಸಿದ್ದಾನೆ. ಕಾಲೇಜಿನಿಂದ ಮನೆಗೆ ಬರುವವರೆಗೂ ಯಾಮಿನಿಯ ಬಗ್ಗೆ ಎಲ್ಲಾ ಮಾಹಿತಿಯನ್ನು ಹಂತಕ ವಿಘ್ನೇಶ್ ಕಲೆ ಹಾಕುತ್ತಿದ್ದ.

ಆರು ತಿಂಗಳ ಹಿಂದೆ ಇದೇ ಆರೋಪಿ ವಿಘ್ನೇಶ್‌, ಯುವತಿಗೆ ಕಿರುಕುಳ ನೀಡಿದ್ದ. ಆಗ ಈ ವಿಚಾರ ಶ್ರೀರಾಂಪುರ ಪೊಲೀಸ್ ಠಾಣೆಯ ಮೆಟ್ಟಿಲು ಸಹ ಹತ್ತಿತ್ತು. ಪೊಲೀಸರು ಆರೋಪಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ‘ಮತ್ತೆ ಎಂದಿಗೂ ಯುವತಿಯ ತಂಟೆಗೆ ಹೋಗುವುದಿಲ್ಲ’ ಎಂದು ವಿಘ್ನೇಶ್‌ ಪೊಲೀಸರಿಗೆ ಮುಚ್ಚಳಿಕೆ ಬರೆದು ಕೊಟ್ಟಿದ್ದ.

ಆರೋಪಿ ವಿಘ್ನೇಶ್‌ ಈ ಹಿಂದೆ ಏರಿಯಾದಲ್ಲಿ ಕರಗ ಇದ್ದಾಗಲೂ ಯಾಮಿನಿ ಪ್ರಿಯಾಗೆ ಕಿರುಕುಳ ನೀಡಿದ್ದ. ಪೊಲೀಸರಿಗೆ ಮುಚ್ಚಳಿಕೆ ಕೊಟ್ಟಿದ್ದರೂ, ಕಳೆದ ಒಂದು ತಿಂಗಳಿನಿಂದ ಮತ್ತೆ ಯಾಮಿನಿಗೆ ಟಾರ್ಚರ್ ಕೊಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ಯಾಮಿನಿ ಪ್ರಿಯಾ ಕುಟುಂಬಸ್ಥರು, ವಿಘ್ನೇಶ್‌ ಎಂಬಾತನೆ ತಮ್ಮ ಮಗಳನ್ನು ಹತ್ಯೆ ಮಾಡಿದ್ದಾನೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಇದೊಂದು ಪೂರ್ವಯೋಜಿತ ಕೊಲೆ ಎಂದು ಅವರು ಆರೋಪಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಕೈಗೊಂಡಿದ್ದು, ಈ ಭೀಕರ ಕೃತ್ಯದ ಹಿಂದೆ ಇರುವ ಸಂಪೂರ್ಣ ಸತ್ಯಾಸತ್ಯತೆಯನ್ನು ಬಯಲು ಮಾಡಲು ಮುಂದಾಗಿದ್ದಾರೆ.

ಇದನ್ನು ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ದೀಪಾವಳಿ ವಿಶ್ – ‘ಕಾಂತಾರ: ಚಾಪ್ಟರ್ 1’ನ ಅದ್ಭುತ ಟ್ರೈಲರ್ ಬಿಡುಗಡೆ!

 

 

Btv Kannada
Author: Btv Kannada

Read More