ಬೆಂಗಳೂರು : RSS ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿನ ಜೆಪಿ ಪಾರ್ಕ್‌ನಲ್ಲಿ ನಡೀತಿದ್ದ ಡಿಸಿಎಂ ಡಿಕೆ ಶಿವಕುಮಾರ್ ನಡಿಗೆ ಕಾರ್ಯಕ್ರಮಕ್ಕೆ ಬಂದ ಬಿಜೆಪಿ ಶಾಸಕ ಮುನಿರತ್ನ ವೇದಿಕೆ ಮೇಲೆ ಭಾರೀ ಹೈಡ್ರಾಮಾ ಸೃಷ್ಟಿಸಿದ್ದಾರೆ. ಇದು ಸರ್ಕಾರಿ ಕಾರ್ಯಕ್ರಮ, ನಾನು ಸ್ಥಳೀಯ ಶಾಸಕನಾದ್ರೂ ಕರೆದಿಲ್ಲ ಎಂದು ಕೂಗಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುನಿರತ್ನ ನಡುವೆ ತಳ್ಳಾಟ ನಡೆದಿದೆ.

ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಶಾಸಕ ಮುನಿರತ್ನ ಆರೋಪ ಮಾಡಿದ್ದಾರೆ. ಇಲ್ಲಿ ಇರೋರು ಜನ ಸಾಮಾನ್ಯರಲ್ಲ, ಕಾಂಗ್ರೆಸ್ ಕಾರ್ಯಕರ್ತರು. ಅಲ್ಲದೇ ನನ್ನ ಮೇಲೆ ಹಲ್ಲೆ ನಡೆಸಲು ಡಿಕೆಶಿ ಪುಡಿ ರೌಡಿಗಳನ್ನು ಕರೆಸಿದ್ದಾರೆ ಎಂದು ಬಿಜೆಪಿ ಶಾಸಕ ಆರೋಪ ಮಾಡಿದ್ದಾರೆ.

ಅಸಲಿಗೆ ನಡೆದಿದ್ದೇನು? ಡಿಕೆ ಶಿವಕುಮಾರ್ ಅವರು ಇಂದು ಮತ್ತಿಕೆರೆಯ ಜೆಪಿ ಪಾರ್ಕ್‌ನಲ್ಲಿ ವಾಕಿಂಗ್ ನಡೆಸಿ ಜನರ ಅಹವಾಲು ಸ್ವೀಕರಿಸಿದ್ದರು. ನಂತರ ಸಂವಾದ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಶಾಸಕ ಮುನಿರತ್ನ ಜನರ ನಡುವೆಯೇ ಕುಳಿತಿದ್ದರು. ಈ ವೇಳೆ ವೇದಿಕೆ ಮೇಲೆ ಬರುವಂತೆ ಮುನಿರತ್ನ ಅವರನ್ನು ಡಿಕೆ ಶಿವಕುಮಾರ್ ಕರೆಯುತ್ತಾರೆ.

ಸಂವಾದ ವೇದಿಕೆ ಮೇಲೆ ಬರುತ್ತಿದ್ದಂತೆ ಮಾತನಾಡಿದ ಶಾಸಕ ಮುನಿರತ್ನ, ಇದು ಸಾರ್ವಜನಿಕ ಕಾರ್ಯಕ್ರಮವಾಗಿದ್ದರೂ ಸ್ಥಳೀಯ ಶಾಸಕನಾಗಿರುವ ನನಗೆ ಆಹ್ವಾನ ನೀಡಿಲ್ಲ. ಈ ಭಾಗದ ಸಂಸದ ಮಂಜುನಾಥ್ ಅವರಿಗೂ ಆಹ್ವಾನ ನೀಡಿಲ್ಲ. ಈ ಮೂಲಕ ನಮ್ಮನ್ನು ಅವಮಾನಗೊಳಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಮುಂದೆ ಬೇಸರ ಹೊರ ಹಾಕಿದರು. ಇದಾದ ನಂತರ ವೇದಿಕೆ ಮೇಲೆಯೇ ಮುನಿರತ್ನ ಧರಣಿಗೆ ಕುಳಿತರು.

ಇದು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಜನತೆಗೆ ಅವಮಾನ ಮಾಡಲಾಗಿದೆ. ನನಗೆ 15 ವರ್ಷದ ಮೊಮ್ಮಗನಿದ್ದಾನೆ. ಈ ವಯಸ್ಸಿನಲ್ಲಿ ನನ್ನ ಮೇಲೆ ಅತ್ಯಾಚಾರ ಕೇಸ್ ಹಾಕಿದರು. ಏಯ್ ಕರಿ ಟೋಪಿ, ಬಾರಯ್ಯ ಎಂದು ನನ್ನನ್ನು ಕರೆದು ಅವಮಾನಿಸಿದ್ದಾರೆ. ಆರ್ ಆರ್ ನಗರದಲ್ಲಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಮನೆಯಲ್ಲಿ ಕುಳಿತಿದ್ದಾಗ ಸಿಡಿಲು ಬಡಿದು ವ್ಯಕ್ತಿ ಸಾವು!







