ಹಾಸನ : ಹಾಸನಾಂಬ ದರ್ಶನೋತ್ಸವ ಆರಂಭಗೊಂಡು ಕೇವಲ ಎರಡು ದಿನಗಳಲ್ಲಿ 1.50 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. 1 ಕೊಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಈ ಬಾರಿ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದುಪಡಿಸಿರುವುದರಿಂದ ಭಕ್ತರು ಸುಗಮವಾಗಿ ದರ್ಶನ ಪಡೆಯುತ್ತಿದ್ದಾರೆ. ಇದರಿಂದಾಗಿ ಭಕ್ತರಲ್ಲಿ ಸಂತಸ ಮೂಡಿದೆ. ನಾಡಿನ ನಾನಾ ಭಾಗಗಳಿಂದ ಭಕ್ತರ ದಂಡೇ ಹಾಸನಾಂಬೆಯ ದರ್ಶನಕ್ಕೆ ಹರಿದು ಬರುತ್ತಿದೆ.
ಶುಕ್ರವಾರ 60 ಸಾವಿರ ಮತ್ತು ಶನಿವಾರ 90 ಸಾವಿರ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರ ಭಕ್ತರ ಸಂಖ್ಯೆ ನಿರೀಕ್ಷೆಗಿಂತ ಕಡಿಮೆಯಿದ್ದರೂ, ಜನಜಾತ್ರೆ ಕಂಡುಬಂದಿದೆ. ಪ್ರತಿನಿತ್ಯ 2 ಲಕ್ಷ ಜನರ ನಿರೀಕ್ಷೆ ಇದ್ದು, ಈ ಭಾರಿ 15 ಕೋಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆಯಿದೆ. ಆದರೆ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಆದಾಯಕ್ಕಿಂತ ಭಕ್ತರ ಸಂತೋಷವೇ ಮುಖ್ಯ. ದೇವಾಲಯಕ್ಕೆ ಬಂದ ಭಕ್ತರ ಟಿಕೆಟ್ ಹಣದಿಂದಲ್ಲ, ಸರ್ಕಾರವೇ ವೆಚ್ಚ ಭರಿಸಲಿದೆ ಎಂದು ಹೇಳಿದ್ದಾರೆ.
ಪ್ರತಿ ದಿನ ಮಧ್ಯಾಹ್ನ ಮತ್ತು ರಾತ್ರಿ ನೈವೇದ್ಯದ ಸಮಯ ಹೊರತುಪಡಿಸಿ ಉಳಿದ ಅವಧಿಯಲ್ಲಿ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಗಣ್ಯರಿಗೆ ನಿಗದಿತ ಸಮಯದಲ್ಲಿ ಮಾತ್ರ ದರ್ಶನಾವಕಾಶ ನೀಡಿ, ಸಾಮಾನ್ಯ ಭಕ್ತರಿಗೆ ಹೆಚ್ಚಿನ ಸಮಯ ಮೀಸಲಿಡಲಾಗಿದೆ. ಇದರಿಂದಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಒಂದರಿಂದ ಒಂದೂವರೆ ಗಂಟೆ ಅವಧಿಯಲ್ಲಿ ದರ್ಶನ ಪಡೆದು ನಿರ್ಗಮಿಸುತ್ತಿದ್ದಾರೆ.







