‘ಬಿಗ್​ಬಾಸ್’ ನಡೆಯುತ್ತಿದ್ದ ಜಾಲಿವುಡ್‌ ಸ್ಟುಡಿಯೋಸ್‌ಗೆ ಬೀಗ – ರಾತ್ರೋರಾತ್ರಿ ಮನೆಯಿಂದ ಎಲ್ಲಾ ಸ್ಪರ್ಧಿಗಳು ಹೊರಕ್ಕೆ!

ಬೆಂಗಳೂರು : ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಆರಂಭದಲ್ಲೇ ಕಾನೂನು ಸಂಕಷ್ಟ ಎದುರಾಗಿದೆ. ಶೋ ಶುರುವಾದ 12 ದಿನಕ್ಕೆ ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್‌ ಸ್ಟುಡಿಯೋಸ್‌ಗೆ ಬೀಗ ಬಿದ್ದಿದೆ. ಬಿಗ್‌ ಬಾಸ್‌ ನಡೆಯುತ್ತಿರುವ ಜಾಗಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್‌ಬಾಸ್ ಮನೆ ಸೆಟ್ ಹಾಕಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. 17 ಮಂದಿ ಸ್ಪರ್ಧಿಗಳು ಮನೆಯೊಳಗೆ ಇದ್ದರೆ ನೂರಾರು ತಂತ್ರಜ್ಞರು, ಸಿಬ್ಬಂದಿ ಕಾರ್ಯಕ್ರಮಕ್ಕಾಗಿ ಕೆಲಸ ಮಾಡುತ್ತಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಲಿಲ್ಲ ಎನ್ನುವ ಕಾರಣಕ್ಕೆ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ನಿನ್ನೆ ರಾತ್ರಿಯೇ ಸ್ಟುಡಿಯೋ ಒಳಗೆ ಇದ್ದ ಎಲ್ಲರನ್ನು ಹೊರಗೆ ಕಳುಹಿಸಿದ್ದಾರೆ.

ಬಿಗ್‌ಬಾಸ್‌ ಮನೆಯಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಯಾವುದೇ ಸಂಸ್ಕರಣೆಯಿಲ್ಲದೆ ಹೊರಗೆ ಬಿಡುತ್ತಿದ್ದಾರೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದಾರೆ. ಗ್ರೀನ್​​ಜೋನ್‌ನಲ್ಲಿದ್ರೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ ಎನ್ನುವ ಆರೋಪಗಳು ಕೇಳಿಬಂದಿದೆ. ಈ ಸಂಬಂಧ ಎರಡು ದಿನಗಳ ಹಿಂದೆ ನೋಟಿಸ್ ನೀಡಿದ್ದರೂ ಜಾಲಿವುಡ್ ಸ್ಟುಡಿಯೋ ಮ್ಯಾನೇಜ್‌ಮೆಂಟ್ ಪ್ರತಿಕ್ರಿಯಿಸಿರಲಿಲ್ಲ. ಹಾಗಾಗಿ ತಹಶೀಲ್ದಾರ್ ನೇತೃತ್ವದಲ್ಲಿ ಸ್ಟುಡಿಯೋ ಗೇಟ್ ಬಂದ್ ಮಾಡಲಾಗಿದೆ.

ಸ್ಟುಡಿಯೋ ಒಳಗೆ ನಡೆಯುತ್ತಿದ್ದ ಬಿಗ್‌ಬಾಸ್ ಶೋಗೂ ವಿಘ್ನ ಎದುರಾಗಿದೆ. ಸದ್ಯ ಸ್ಪರ್ಧಿಗಳು, ತಂತ್ರಜ್ಞರಿಗೆ ರಾಮನಗರದ ಈಗಲ್‌ಟನ್ ರೆಸಾರ್ಟ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : ಎಸ್‌.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶಕರಾಗಿ 50 ವರ್ಷ ಪೂರ್ಣ – ಅ.23ರಿಂದ 5 ದಿನಗಳ ಕಾಲ ʼಎಸ್‌ವಿಆರ್ 50ʼ ಸಮಾರಂಭ!

Btv Kannada
Author: Btv Kannada

Read More