ಮಾಜಿ ಉಪಮೇಯರ್ ಎಲ್. ಶ್ರಿನಿವಾಸ್ & ಗ್ಯಾಂಗ್ ನ ಒಂದು ಕಂಪ್ಲೇಂಟ್ ನಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಕ್ಕಸ ಬೆರಗಾಗಿದ್ದಾರೆ. ಪಾಲಿಕೆ ಮುಂಬರುವ ಬೆಂಗಳೂರು ಮಹಾನಗರ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಪಕ್ಷದ ಕಾರ್ಯಕರ್ತರು ಹವಣಿಸುತ್ತಿದ್ದರೆ, ಪಕ್ಷದ ಟಾಪ್ ಲೆವೆಲ್ ನಾಯಕರು ಬಿಜೆಪಿ ಜೊತೆ ಒಳಹೊಂದಾಣಿಕೆ ಮಾಡಿಕೊಳ್ಳು ತ್ತಿದ್ದಾರೆ. ಇನ್ನು ಬಿಬಿಎಂಪಿಯ ಎರಡು ವಾರ್ಡ್ ಗಳ ರೂಪುರೇಷೆ ದಿಢೀರ್ ಬದಲಾವಣೆಯಾಗಲು KPCC ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯಕ ಆರ್ ಅಶೋಕ್ ಕಾರಣ ಎಂದು ಸುರ್ಜೇವಾಲಾ ಅವರಿಗೆ ಎಲ್. ಶ್ರಿನಿವಾಸ್ & ಗ್ಯಾಂಗ್ ಕೊಟ್ಟಿದೆ ಎಂದು ವಿಶ್ವವಾಣಿ ಪತ್ರಿಕೆ ವರದಿ ಮಾಡಿತ್ತು.

ಆದರೆ ಇದೀಗ ನಾನು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ದೂರು ಕೊಟ್ಟಿಲ್ಲ ಎಂದು ಪತ್ರಿಕಾ ವರದಿಗೆ ಮಾಜಿ ಕಾರ್ಪೊರೇಟರ್ ಎಲ್ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಪ್ರಕಟವಾಗಿರುವ ವಿಶ್ವವಾಣಿ ಪತ್ರಿಕೆಯಲ್ಲಿ ಆರ್. ಟಿ. ವಿಠಲ್ ಮೂರ್ತಿ ಎಂಬುವವರು ತಮ್ಮ ಲೇಖನದಲ್ಲಿ ಸುರ್ಜೇವಾಲಾ ರವರಿಗೆ ಮಾಜಿ ಉಪಮೇಯರ್ ಎಲ್. ಶ್ರಿನಿವಾಸ್ ಸೇರಿ ಕೆಲವರು ಡಿ. ಕೆ. ಶಿವಕುಮಾರ್ ರವರ ವಿರುದ್ಧ ದೂರು ನೀಡಿದ್ದಾರೆ ಎಂದು ಬರೆದಿದ್ದಾರೆ. ನಾನಾಗಲೀ, ನಮ್ಮ ಸುತ್ತಮುತ್ತಲಿನ ನಾಯಕರಾಗಲೀ, ಇಂತಹ ಯಾವುದೇ ದೂರು ನೀಡಿಲ್ಲ. ಸುರ್ಜೇವಾಲಾರವರನ್ನು ಭೇಟಿ ಮಾಡುವುದಾಗಲೀ, ಅವರಿಗೆ ಪತ್ರ ಬರೆಯುವುದಾಗಲೀ ಮಾಡಿಲ್ಲ ಎಂದು ಕಾರ್ಪರೇಟರ್ ಎಲ್ ಶ್ರೀನಿವಾಸ್ ಕಿಡಿ ಕಾರಿದ್ದಾರೆ.

ಅದ್ಯಾವ ಮೂಲಗಳು ಈ ಮಾಹಿತಿಯನ್ನು ಅವರಿಗೆ ಕೊಟ್ಟರೋ ಗೊತ್ತಿಲ್ಲ. ಡಿ. ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಮೇಲಿನ ನಂಬಿಕೆಯಿಂದಲೇ ನಾವೆಲ್ಲರೂ ಪಕ್ಷ ಸೇರಿದ್ದು, ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ಮುಂಬರುವ ಬಿಬಿಎಂಪಿ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪದ್ಮನಾಭ ನಗರ ಕ್ಷೇತ್ರದಲ್ಲಿ ಬಲಗೊಳಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇದನ್ನು ಸಹಿಸದ ಯಾರೋ ಈ ಸುಳ್ಳು ಮಾಹಿತಿ ನೀಡಿ, ಪಕ್ಷದೊಳಗೆ ಗೊಂದಲ ಸೃಷ್ಟಿಸುವ ಜತೆಗೆ, ನಮ್ಮನ್ನು ಬಲಿಪಶುವಾಗಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಗುಡುಗಿದ್ದಾರೆ.

ನಾವು ಡಿ. ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ, ಸಿಎಂ ಸಿದ್ದರಾಮಯ್ಯ ರವರ ಆಡಳಿತದಲ್ಲಿ ಹಾಗೂ ಹಿರಿಯರಾದ ರಾಮಲಿಂಗ ರೆಡ್ಡಿ ರವರ ಮಾರ್ಗದರ್ಶನದಲ್ಲಿ ಪಕ್ಷದ ಕೆಲಸ ಮಾಡಿಕೊಂಡು ಹೋಗುತ್ತಿದ್ದು, ಇದನ್ನು ಕೆಡಿಸಲು ಪ್ರಯತ್ನ ನಡೆಯುತ್ತಿದೆ. ಇದರ ಭಾಗವಾಗಿ ಈ ಲೇಖನ ಪ್ರಕಟವಾಗಿದ್ದು, ಇದೊಂದು ಶುದ್ಧ ಸುಳ್ಳು. ನಾವು ಸುರ್ಜೇವಾಲಾರವರ ಭೇಟಿಯಾಗಲೀ, ಪತ್ರ ಬರೆಯುವುದಾಗಲೀ ಮಾಡಿಲ್ಲವಾದ್ದರಿಂದ ಇಂತಹ ಆಧಾರರಹಿತ ಸುದ್ದಿ ಮೂಲಕ ಗೊಂದಲ ಸೃಷ್ಟಿಯ ಪ್ರಯತ್ನ ನಡೆದಿದೆ ಎಂದು ಕಾರ್ಪರೇಟರ್ ಎಲ್ ಶ್ರೀನಿವಾಸ್ ಸ್ಪಷ್ಟನೆ ಕೊಟ್ಟಿದ್ದಾರೆ.








