ಕೋಲ್ಕತ್ತಾ : ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಸುರಿಯುತ್ತಿರುವ ರಣಭೀಕರ ಮಳೆಗೆ ಹಲವೆಡೆ ಭೂಕುಸಿತ ಉಂಟಾಗಿದ್ದು, ಸಾವಿನ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.
ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 23 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸರ್ಸಾಲಿ, ಜಸ್ಬೀರ್‌ಗಾಂವ್, ನಾಗರಕಟಾ, ಮಿರಿಕ್ ಬಸ್ತಿ, ಧಾರ್‌ಗಾವ್ (ಮೆಚಿ), ಮತ್ತು ಮಿರಿಕ್ ಲೇಕ್ ಪ್ರದೇಶ ಸೇರಿದಂತೆ ಹಲವೆಡೆ ಜನ ಮೃತಪಟ್ಟಿದ್ದಾರೆ.
ಕೇವಲ 12 ಗಂಟೆಯಲ್ಲಿ 300 ಮಿ.ಮೀ ಮಳೆಯಾಗಿದ್ದರಿಂದ ಪ್ರವಾಹ, ಭೂಕುಸಿತ ಉಂಟಾಗಿದೆ ಎನ್ನಲಾಗಿದೆ. ಸದ್ಯ ಘಟನಾ ಸ್ಥಳದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಚರಣೆ ನಡೆಸುತ್ತಿವೆ. ನಾಗರಕಟಾದ ಧಾರ್‌ಗಾವ್‌ನಲ್ಲಿ ಭೂಕುಸಿತದಿಂದಾಗಿ ನೆಲಸಮವಾದ ಮನೆಗಳ ಅವಶೇಷಗಳಡಿಯಿಂದ ಕನಿಷ್ಠ 40 ಜನರನ್ನು ರಕ್ಷಿಸಲಾಗಿದೆ.
ಇನ್ನೂ ಬಂಗಾಳ-ಸಿಕ್ಕಿಂ ಡಾರ್ಜಿಲಿಂಗ್-ಸಿಲಿಗುರಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಭೂಕುಸಿತಸಂಭವಿಸಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಹಿತಕರ ಘಟನೆಗಳನ್ನು ತಡೆಗಟ್ಟುವ ಸಲುವಾಗಿ, ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತವು ಡಾರ್ಜಿಲಿಂಗ್‌ನ ಟೈಗರ್‌ಹಿಲ್ ಮತ್ತು ರಾಕ್ ಗಾರ್ಡನ್ ಸೇರಿದಂತೆ ಪ್ರವಾಸಿ ತಾಣಗಳನ್ನು ಮುಚ್ಚಲು ನಿರ್ಧರಿಸಿದೆ. ಸಾರ್ವಜನಿಕರ ಸಹಾಯಕ್ಕಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 24/7 ಕಂಟ್ರೋಲ್ ರೂಮ್ ತೆರೆದಿದ್ದಾರೆ. ಈಗಾಗಲೇ ಪರಿಸ್ಥಿತಿಯನ್ನು ಕಂಟ್ರೋಲ್ ರೂಮ್ ಮೂಲಕ ಮೇಲ್ವಿಚಾರಣೆ ಮಾಡುತ್ತಿದ್ದು, ಇಂದು (ಅ.6) ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ಇದನ್ನೂ ಓದಿ : ಜಾತಿ ಗಣತಿಗೆ ನಾಳೆಯೇ ಡೆಡ್ಲೈನ್ – ಬೆಂಗಳೂರಲ್ಲಿ ನಿನ್ನೆ ಒಂದೇ ದಿನ 95,024 ಮನೆ ಸಮೀಕ್ಷೆ!
Author: Btv Kannada
Post Views: 296







