ಹಾಸನ : ಜಿಲ್ಲೆಯ ಅಧಿದೇವತೆ ಹಾಸನಾಂಬೆ ದರ್ಶನೋತ್ಸವಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಲಕ್ಷಾಂತರ ಭಕ್ತರು ಹಾಸನದತ್ತ ಬರುವ ಸಿದ್ದತೆಯಲ್ಲಿದ್ದಾರೆ. ಜಿಲ್ಲಾಡಳಿತ ಕೂಡ ಭಕ್ತರ ಸ್ವಾಗತಕ್ಕೆ ಭರ್ಜರಿ ತಯಾರಿ ನಡೆಸಿದ್ದು. ಹೀಗಿರುವಾಗಲೇ ಹಾಸನಾಂಬೆ ಉತ್ಸವ ಟೆಂಡರ್‌ನಲ್ಲಿ ಭಾರೀ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಲಕ್ಷ ಲಕ್ಷ ಕಾಮಗಾರಿಗೆ ಕರೆಯಲಾಗಿರುವ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ಆಗಿದೆ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಆರೋಪಿಸಿದ್ದಾರೆ.
ಹಾಸನಾಂಬೆ ದರ್ಶನೋತ್ಸವಕ್ಕೆ ಅಕ್ಟೋಬರ್ 9ರಂದು ದೇಗುಲದ ಬಾಗಿಲು ತೆರೆದರೆ ಅಕ್ಟೋಬರ್ 23ಕ್ಕೆ ಮತ್ತೆ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ಅಪಾರ ಸಂಖ್ಯೆಯಲ್ಲಿ ಬರುವ ಭಕ್ತರ ಸ್ವಾಗತಕ್ಕೆ ಹಾಸನದ ಜಿಲ್ಲಾಡಳಿತ ಕೋಟಿ ಕೋಟಿ ಖರ್ಚು ಮಾಡಿ ಇಡೀ ನಗರವನ್ನು ಸಿಂಗರಿಸಿದೆ. ಬ್ಯಾರಿಕೇಡ್ ಅಳವಡಿಕೆ, ಟೆಂಟ್ ನಿರ್ಮಾಣ, ಸಿಸಿ ಕ್ಯಾಮೆರಾ ಅಳವಡಿಕೆ ಹೀಗೆ ಹತ್ತು ಹಲವು ಕಾರ್ಯಗಳಿಗೆ ಟೆಂಡರ್ ಕರೆಯಲಾಗಿದ್ದು, ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಗೋಲ್ಮಾಲ್ ಆಗಿದೆ ಎಂದು ದೇವರಾಜೇಗೌಡ ಆರೋಪ ಮಾಡಿದ್ದಾರೆ.
20 ಲಕ್ಷಕ್ಕೆ ಖರೀದಿ ಮಾಡಬಹುದಾದ ಸಿಸಿ ಕ್ಯಾಮೆರಾಗಳಿಗೆ 60 ಲಕ್ಷಕ್ಕೆ ಬಾಡಿಗೆ ಟೆಂಡರ್ ಕರೆಯಲಾಗಿದೆ, 87 ಲಕ್ಷಕ್ಕೆ ಬ್ಯಾರಿಕೇಡ್ ಹಾಗೂ ಟೆಂಟ್ ಅಳವಡಿಕೆಗೆ ಟೆಂಡರ್ ಕರೆದಿದ್ದು, 74 ಲಕ್ಷಕ್ಕೆ ಕೆಲಸ ಮಾಡುವವರನ್ನು ಬಿಟ್ಟು 86 ಲಕ್ಷದ 99 ಸಾವಿರಕ್ಕೆ ಟೆಂಡರ್ ಹಾಕಿದವರ ಅರ್ಜಿಯನ್ನು ಮಾನ್ಯ ಮಾಡಲಾಗಿದೆ. ಸತತ ಏಳು ವರ್ಷಗಳಿಂದ ಒಬ್ಬನೇ ವ್ಯಕ್ತಿಗೆ ಅಧಿಕಾರಿಗಳು ಟೆಂಡರ್ ನೀಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದೇವರ ಹೆಸರಿನಲ್ಲಿ ಜನರ ಹಣ ಲೂಟಿ ಮಾಡಲಾಗ್ತಿದೆ ಎಂದು ದೇವರಾಜೇಗೌಡ ಕೆಂಡಕಾರಿದ್ದು, ಈ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ, ಭೂಕುಸಿತ – 14 ಮಂದಿ ಸಾವು!







