ಬೆಂಗಳೂರು : ಯಲಹಂಕದ ಸಿಂಗಹಳ್ಳಿ ಗ್ರಾಮದ 500 ಕೋಟಿ ಬೆಲೆ ಬಾಳುವ 33 ಎಕರೆ ಸರ್ಕಾರಿ ಭೂಮಿಯನ್ನು ಭ್ರಷ್ಟ ರೆವಿನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್ ಟೀಂ ವ್ಯವಸ್ಥಿತವಾಗಿ ಸಂಚು ರೂಪಿಸಿ ಲೂಟಿ ಮಾಡಿದ್ದರು. ರೆವಿನ್ಯೂ ಇನ್ಸ್ಪೆಕ್ಟರ್ ಮಾಡಿರುವ ಅತೀ ದೊಡ್ಡ ಭೂಹಗರಣವನ್ನು ಬಿಟಿವಿ ಬಯಲು ಮಾಡಿತ್ತು, ಇದೀಗ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಲಪಟಾಯಿಸಿರುವ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದ್ದು, ನೂರಾರು ಕೋಟಿ ಭೂ ಹಗರಣದ ಕಿಂಗ್ಪಿನ್ ಬಾಗಲೂರು ಭ್ರಷ್ಟ ರೆವಿನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್ ಸೇರಿ ಕೆಲವು ಅಧಿಕಾರಿಗಳ ವಿರುದ್ಧ FIR ದಾಖಲಿಸುವಂತೆ ಯಲಹಂಕ ಭೂ ನ್ಯಾಯ ಮಂಡಳಿ ಆದೇಶ ನೀಡಿದೆ.

ಸಿಂಗಹಳ್ಳಿ ಗ್ರಾಮ ಸರ್ಕಾರಿ ಜಮೀನು ಸರ್ವೆ ನಂ.9, 10, 11ರಲ್ಲಿ ಒಟ್ಟು 33 ಎಕರೆ 34 ಗುಂಟೆಯಿದ್ದು, ಇಲ್ಲಿ ಬಹಳ ಹಿಂದಿನ ಕಾಲದಿಂದಲೂ ಇರುವ ಸರ್ಕಾರಿ ಕೆರೆಯ ನೀರು ಮುಳುಗಡೆ ಜಮೀನನ್ನು ಭ್ರಷ್ಟ ಅಧಿಕಾರಿಗಳು ಲೂಟಿ ಮಾಡಿದ್ದರು. ರೆವಿನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್, ಶೀರೇಸ್ತೆದಾರ್ ಗ್ರೇಡ್ ಆರ್. ಸುಬ್ರಮಣಿ, ಯಲಹಂಕ ತಾಲ್ಲೂಕು ಕಛೇರಿ ಹೆಚ್ಚುವರಿ ಶೀರೇಸ್ತೆದಾರ್ ನಂದನ್ ಬಿ.ಎಂ, ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ವ್ಯವಸ್ಥಾಪಕ ಎಸ್. ಮಹೇಶ್, ಯಲಹಂಕ ತಹಶೀಲ್ದಾರ್ ಶ್ರೇಯಸ್ ಪಾಟೀಲ್, ಹಿಂದಿನ ವಿಶೇಷ ತಹಶೀಲ್ದಾರ್ ಶಿವಕುಮಾರ್, ಉಪನೋಂದಾಣಿಕಾರಿ ಬ್ಯಾಟರಾಯನಪುರ ಕೆ.ವಿ. ರವಿಕುಮಾರ್ ಹಾಗೂ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಪ್ರಮೋದ್ ಎಲ್ ಪಾಟೀಲ್ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಜಮೀನನ್ನು 30 ಕೋಟಿಗೆ ಮಾರಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದರು.

ಬಾಗಲೂರು ರೆವಿನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್ ನೂರಾರು ಕೋಟಿ ಬೆಲೆಬಾಳುವ ಸರ್ಕಾರಿ ಜಮೀನಿಗೆ ಕನ್ನ ಹಾಕಿದ್ದು, ಸದ್ಯ 500 ಕೋಟಿ ರೂಪಾಯಿ ಮೌಲ್ಯದ ಈ 33 ಎಕರೆ ಜಮೀನನ್ನು ಭೂಕಬಳಿಕೆ ಮಾಡಿರುವ ರೆವಿನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್ ಸೇರಿ ಕೆಲವು ಭ್ರಷ್ಟ ಅಧಿಕಾರಿಗಳಿಗೆ ದಂಡ ವಿಧಿಸಿ ಇವರುಗಳನ್ನು ಶಿಕ್ಷೆಗೆ ಒಳಪಡಿಸಿ ಸೇವೆಯಿಂದ ಅಮಾನತ್ತು ಮಾಡುವಂತೆ ಯಲಹಂಕ ಭೂ ನ್ಯಾಯ ಮಂಡಳಿ ಆದೇಶ ಹೊರಡಿಸಿದೆ.

ರೆವಿನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್ ಭೂಕಬಳಿಕೆ ಬಗ್ಗೆ ಬಿಟಿವಿ ನಿರಂತರ ವರದಿ ಮಾಡಿತ್ತು, ಹಾಗಾಗಿ ಸುದ್ದಿ ಪ್ರಸಾರಕ್ಕೆ ತಡೆಯಾಜ್ಞೆ ತರಲು ಭ್ರಷ್ಟಾತೀಭ್ರಷ್ಟ ಸಂದೀಪ್ ಸಿಂಗ್ ಟೀಮ್ ಮಾನ್ಯ ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿತ್ತು. ಆದ್ರೆ ಸಲ್ಲಿಸಿದ ಸೇಲ್ ಡೀಡ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮಾನ್ಯ ಸಿಟಿ ಸಿವಿಲ್ ನ್ಯಾಯಾಲಯ, ಸಂದೀಪ್ & ಟೀಮ್ ಪರ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ಇದೀಗ ರೆವಿನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್ ವಿರುದ್ಧ FIR ದಾಖಲಿಸಲು ಯಲಹಂಕ ಭೂ ನ್ಯಾಯ ಮಂಡಳಿ ಆದೇಶ ನೀಡಿದ್ದು, ಹೀಗಾಗಿ ಕೋಟಿ ಕೋಟಿ ಮೌಲ್ಯದ ಸರ್ಕಾರಿ ಕೆರೆ ಜಾಗ ಅಕ್ರಮವಾಗಿ ಮಾರಾಟ ಮಾಡಿದ ಸಂದೀಪ್ ಸಿಂಗ್ ಶೀಘ್ರ ಜೈಲು ಸೇರಲಿದ್ದಾರೆ.
ಇದನ್ನೂ ಓದಿ : ಬೆಂ-ಮೈ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರು ಯುವಕರು ಸ್ಥಳದಲ್ಲೇ ಸಾವು!







