ಮೈಸೂರು ರೇಷ್ಮೆ ಸೀರೆ, ಮಲ್ಲಿಗೆ ಮುಡಿದು ನಾಡಹಬ್ಬ ದಸರಾ ಉದ್ಘಾಟಿಸಿದ ಬಾನು ಮುಷ್ತಾಕ್‌!

ಮೈಸೂರು : ನಾಡ ಅಧಿದೇವತೆ ಮೈಸೂರು ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ದಸರಾಕ್ಕೆ ಇಂದು ಅದ್ದೂರಿ ಚಾಲನೆ ಸಿಕ್ಕಿದೆ.

ದಸರಾ ಉದ್ಘಾಟನೆಗೆ ಆಗಮಿಸಿದ ಲೇಖಕಿ ಬಾನು ಮುಷ್ತಾಕ್‌ ಅವರು ಚಾಮುಂಡಿ ತಾಯಿಯ ದರ್ಶನ ಪಡೆದು ಮಂಗಳಾರತಿ ಸ್ವೀಕರಿಸಿದ್ದಾರೆ. ಹಸಿರು ಬಾರ್ಡರ್ ಇರುವ ಹಳದಿ ಮೈಸೂರು ರೇಷ್ಮೆ ಸೀರೆ, ತಲೆಗೆ ಮೈಸೂರು ಮಲ್ಲಿಗೆ ಮುಡಿದು ಸಿಎಂ ಸಿದ್ದರಾಮಯ್ಯ, ಸಚಿವರ ಜೊತೆ ಬಾನು ಮುಷ್ತಾಕ್‌ ದೇವಸ್ಥಾನಕ್ಕೆ ಆಗಮಿಸಿದ್ದಾರೆ.

ಗರ್ಭಗುಡಿ ಮುಂಭಾಗದ ಆವರಣದಲ್ಲಿ ನಿಂತು ತಾಯಿ ಚಾಮುಂಡಿ ತಾಯಿಯ ದರ್ಶನ ಪಡೆದ ಬಾನು ಮುಷ್ತಾಕ್‌ ಅವರು, ನಂತರ ಗಣಪತಿಗೆ ಕೈ ಮುಗಿದು, ಮಂಗಳಾರತಿ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ. ಬಳಿಕ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉದ್ಘಾಟನೆ ಮಾಡಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ಬಾನು ಮುಷ್ತಾಕ್ ಇಡೀ ಕುಟುಂಬವೇ ಹಾಜರಾಗಿದೆ. ಖಾಸಗಿ ಹೋಟೆಲಿನಿಂದ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಬಾನು ಮುಷ್ತಾಕ್‌ ಆಗಮಿಸಿದರೆ, ಸಿಎಂ ಮತ್ತು ಸಚಿವರು ಐರಾವತ ಬಸ್ಸಿನಲ್ಲಿ ಆಗಮಿಸಿದ್ದಾರೆ. ಜಾನಪದ ಕಲಾತಂಡಗಳು ಗಣ್ಯರನ್ನು ಸ್ವಾಗತ ಮಾಡಿದ್ದು, ನಂತರ ಜಾನಪದ ಕಲಾ ತಂಡಗಳ ಜೊತೆ ಮಹಿಷಾಸುರ ಪ್ರತಿಮೆಯಿಂದ ಬಾನು ಮುಷ್ತಾಕ್, ಸಿಎಂ ಸಿದ್ದರಾಮಯ್ಯ, ಸಚಿವರು ಚಾಮುಂಡಿ ದೇವಸ್ಥಾನದ ಒಳಗಡೆ ಪ್ರವೇಶಿಸಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ : ಕುಡಿದ ಮತ್ತಲ್ಲಿ ಫಾಸ್ಟ್​​​ಫುಡ್​​ ಮಾಲೀಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆವಾಜ್ ಹಾಕಿದ ಪುಂಡ – ದೂರು ದಾಖಲು!

Btv Kannada
Author: Btv Kannada

Read More