ಬೆಂಗಳೂರು : ದಸರಾ ಹಬ್ಬಕ್ಕೆ ಬೆಂಗಳೂರಿನಿಂದ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದ್ದು, ಈ ಹಿನ್ನೆಲೆ KSRTC ಪ್ರಯಾಣಿಕರ ಸಂಚಾರ ಸೇವೆಗೆಂದು ವಿಶೇಷ ಬಸ್‌ಗಳ ಕಾರ್ಯಾಚರಣೆ ನಡೆಸಲಿದೆ. ಇಲ್ಲಿ ವೇಗದೂತ, ರಾಜಹಂಸ, ಸ್ವೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್), ಅಂಬಾರಿ ಕ್ಲಬ್ ಕ್ಲಾಸ್, ಪಲ್ಲಕ್ಕಿ ಸ್ವೀಪರ್ ಹಾಗೂ ಅಶ್ವಮೇಧ ಬಸ್‌ಗಳು ಸಂಚರಿಸಲಿವೆ.
KSRTC ಒಟ್ಟು 2,300ಕ್ಕೂ ಹೆಚ್ಚು ವಿಶೇಷ ಬಸ್‌ಗಳನ್ನು ಬಿಡುಗಡೆ ಮಾಡಿದೆ. ಆಯುಧ ಪೂಜೆ ಹಿನ್ನೆಲೆಯಲ್ಲಿ ಸಾಲುಸಾಲು ರಜೆಯಿರುವ ಕಾರಣ ಬೆಂಗಳೂರಿನಿಂದ ರಾಜ್ಯ ಮತ್ತು ಹೊರರಾಜ್ಯಗಳಿಗೆ ತೆರಳುವವರ ಅನುಕೂಲಕ್ಕಾಗಿ KSRTC ಸೆ.26, 27 ಮತ್ತು ಸೆ.30ರಂದು 2,300 ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಈ ಬಸ್‌ಗಳು ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ಕಾರ್ಯಾಚರಣೆಗಿಳಿಯಲಿವೆ. ಈ ಹೆಚ್ಚುವರಿ ಬಸ್‌ಗಳು ವಿವಿಧ ನಗರಗಳಿಂದ ಬೆಂಗಳೂರಿಗೆ ಅ.2 ಹಾಗೂ 5ರಂದು ಸೇವೆ ನೀಡಲಿವೆ.
ದಸರಾ ಬಸ್‌ಗಳ ಸಂಚಾರ ಮಾರ್ಗ : ಈ KSRTC ವಿಶೇಷ ಬಸ್‌ಗಳು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಸೇವೆ ನೀಡಲಿವೆ. ಅಷ್ಟು ಮಾತ್ರವಲ್ಲದೇ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿರಾಪಳ್ಳಿ, ಪುದುಕೋಟೆ, ಪಣಜಿ, ಶಿರಡಿ, ಪೂಣೆ, ಏರ್ನಾಕುಲಂ, ಪಾಲಕ್ಕಾಡ್ ಮುಂತಾದ ಅಂತರರಾಜ್ಯ ತಾಣಗಳಿಗೂ ಸಂಚಾರ ನಡೆಸಲಿವೆ.
ಇನ್ನು ಮೈಸೂರಿನ ದಸರಾ ಹಬ್ಬಕ್ಕೆ ವಿವಿಧ ಭಾಗಗಳಿಂದ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮಾತ್ರ 260 ಹೆಚ್ಚುವರಿ ಬಸ್‌ಗಳು ಸಂಚಾರ ಮಾಡಲಿವೆ. ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ, ಧಾರ್ಮಿಕ ಹಾಗೂ ಪ್ರೇಕ್ಷಣೀಯ ತಾಣಗಳಿಗೆ ಇನ್ನೂ 350 ಹೆಚ್ಚುವರಿ ಬಸ್‌ಗಳು ಸೇವೆ ನೀಡಲಿವೆ. ಮೈಸೂರಿಗೆ ಸಿಮೀತವಾಗಿ ಒಟ್ಟು 610 ವಿಶೇಷ ಬಸ್‌ಗಳು ಓಡಾಲಿವೆ.
ಟೂರ್ ಪ್ಯಾಕೇಜ್ ಸೇವೆ ಸಹ ಲಭ್ಯ : ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರಿನಿಂದ ಪ್ರಾರಂಭವಾಗುವ ವಿಶೇಷ ಒಂದು ದಿನದ ಪ್ಯಾಕೇಜ್ ಟೂರ್‌ಗಳನ್ನು ಕೂಡ KSRTC ವ್ಯವಸ್ಥೆ ಮಾಡಿದೆ. ಅದರಲ್ಲಿ “ಗಿರಿದರ್ಶಿನಿ’ ಪ್ರವಾಸ ಪ್ಯಾಕೇಜ್ ಇದೆ. ಇದರಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟಕ್ಕೆ (ದರ: ವಯಸ್ಕ-₹450 / ಮಕ್ಕಳು-₹300) ಹೋಗಿಬರಬಹುದು.
ಅದೇ ರಿತಿ “ಜಲದರ್ಶಿನಿ’ ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ, ರಾಜಾಸೀಟ್, ಹಾರಂಗಿ, ಕೆ.ಆರ್.ಎಸ್.ಗೆ (ದರ: ವಯಸ್ಕ-₹500 / ಮಕ್ಕಳು-₹350), ಮತ್ತು “ದೇವದರ್ಶಿನಿ’ ಪ್ಯಾಕೇಜ್‌ನಡಿ ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ದರ: ವಯಸ್ಕ-₹330/ಮಕ್ಕಳು-₹225)ಗೆ ಹೋಗಿ ಬರಲು ಅನುಕೂಲವಾಗುವಂತೆ ಮೈಸೂರು ಘಟಕದಿಂದ ಏಕ ದಿನದ ಟೂರ್ ಪ್ಯಾಕೇಜ್ ಘೋಷಣೆ ಆಗಿದ್ದು, ಸೆಪ್ಟೆಂಬರ್ 27ರಿಂದ ಅಕ್ಟೋಬರ್ 7ರವರೆಗೆ ಈ ಸೇವೆ ಸಿಗಲಿದೆ.
ಇದನ್ನೂ ಓದಿ : ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ಕೇಸ್ – ಸ್ಫೋಟಕ 9 ವಿಡಿಯೋಗಳನ್ನು ಹರಿಬಿಟ್ಟ ಮಹೇಶ್ ಶೆಟ್ಟಿ ತಿಮರೋಡಿ!







