ಬೆಂಗಳೂರು : ವ್ಯಾಪಾರದ ವಿಚಾರಕ್ಕೆ ಪಕ್ಕದ ಬಟ್ಟೆ ಅಂಗಡಿ ಮಾಲೀಕನ ಕೊಲೆಗೆ ಸುಪಾರಿ ನೀಡಿದ್ದ ಟೆಕ್ಸ್‌ಟೈಲ್ಸ್ ಮಳಿಗೆ ಮಾಲೀಕನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುದ್ದಣ್ಣ ಲೇಔಟ್ ನಿವಾಸಿ ವೇನರಾಮ್ (43) ಬಂಧಿತ ಆರೋಪಿ.
ಬಾಗಲಗುಂಟೆಯ ಮುದ್ದಣ್ಣ ಲೇಔಟ್‌ನ ಸಿಡೇದಹಳ್ಳಿಯಲ್ಲಿ ನೇಮರಾಮ್ ಎಂಬಾತ ಹ್ಯಾಪಿ ಟೆಕ್ಸ್‌ಟೈಲ್ಸ್ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಆ ಅಂಗಡಿ ಪಕ್ಕದಲ್ಲೇ ಆರೋಪಿ ವೇನರಾಮ್ ಕೂಡ ಹೈ ಫ್ಯಾಷನ್ಸ್ ಟೆಕ್ಸ್‌ಟೈಲ್ಸ್ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದರು.

ನೇಮರಾಮ್ ಅಂಗಡಿಯಲ್ಲಿ ಉತ್ತಮವಾಗಿ ವ್ಯಾಪಾರ ನಡೆಯುತ್ತಿತ್ತು. ಹೀಗಾಗಿ, ಆರೋಪಿ ವೇನರಾಮ್, ‘ದೂರುದಾರ ನೇಮರಾಮ್ ಅಂಗಡಿಯಲ್ಲಿ ಕಳಪೆ ಗುಣಮಟ್ಟದ ಬಟ್ಟೆಗಳಿವೆ’ ಎಂಬುದಾಗಿ ಅಪಪ್ರಚಾರ ಮಾಡುತ್ತಿದ್ದ’. ಈ ಮಧ್ಯೆ ನೇಮರಾಮ್, ವೇನರಾಮ್‌ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನಿಗೆ ಹೆಚ್ಚಿನ ಸಂಬಳ ಕೊಟ್ಟು ತನ್ನ ಅಂಗಡಿಗೆ ಸೇರಿಸಿಕೊಂಡಿದ್ದ.
ಅದರಿಂದ ಕೋಪಗೊಂಡಿದ್ದ ಆರೋಪಿ ವೇನರಾಮ್, ರಾಜಸ್ಥಾನದ ವಿನೋದ್ ಜಾಟ್ ಎಂಬಾತನಿಗೆ ನೇಮರಾಮ್‌ನ ಹತ್ಯೆಗೆ 5 ಲಕ್ಷಕ್ಕೆ ಸುಪಾರಿ ನೀಡಿದ್ದ. ಅದರಂತೆ ಆರೋಪಿಗಳು ಅಂಗಡಿ ವ್ಯಾಪಾರ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ನೇಮರಾಮ್ ಮೇಲೆ ಎರಡು ಬೈಕ್‌ಗಳಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಆ ಬಳಿಕ ದಾಳಿಯಿಂದ ತಪ್ಪಿಸಿಕೊಂಡಿದ್ದ ನೇಮರಾಮ್, ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಸದ್ಯ ಸುಪಾರಿ ನೀಡಿದ ವೇನರಾಮ್ನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಘಟನಾ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಪಾರಿ ಪಡೆದ ಆರೋಪಿ ವಿನೋದ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ನಿರ್ಮಲಾನಂದನಾಥ ಶ್ರೀ ನೇತೃತ್ವದಲ್ಲಿ ಇಂದು ಒಕ್ಕಲಿಗರ ಸಭೆ – ಮಾಜಿ ಪ್ರಧಾನಿ ದೇವೇಗೌಡ ಸೇರಿ ಅನೇಕ ನಾಯಕರು ಭಾಗಿ!







