ನವದೆಹಲಿ : ನಾಡ ಹಬ್ಬ ದಸರಾ ಉದ್ಘಾಟಿಸಲು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಲೇಖಕಿ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀ ಕೋರ್ಟ್ ವಜಾ ಮಾಡಿದೆ. ಪ್ರತಾಪ್ ಸಿಂಹ ಪರ ಹೆಚ್.ಎಸ್. ಗೌರವ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿ, ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಸಹಮತ ವ್ಯಕ್ತಪಡಿಸಿದೆ.
ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಪ್ರತಾಪ್ ಸಿಂಹ ಸೇರಿ ಮೂರು ಮಂದಿ ಹೈಕೋರ್ಟ್ನಲ್ಲಿ 3 ಪಿಐಎಲ್ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸಿಜೆ ವಿಭು ಬಖ್ರು, ನ್ಯಾ.ಸಿ.ಎಂ.ಜೋಶಿ ಅವರಿದ್ದ ನ್ಯಾಯ ಪೀಠ 3 ಅರ್ಜಿಯನ್ನು ವಜಾಗೊಳಿಸಿದೆ. ದಸರಾ ಉದ್ಘಾಟಕರ ಆಯ್ಕೆಯಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಹೇಳಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಆ ಬಳಿಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಮೇಲ್ಮನವಿ ಸಲ್ಲಿಸಲಾಗಿತ್ತು. ಇಂದು ವಿಚಾರಣೆ ನಡೆಸಲು ಕೋರ್ಟ್ ಸಮ್ಮತಿಸಿತ್ತು.
ಇದೀಗ ದಸರಾ ಮೇಲ್ಮನವಿ ಅರ್ಜಿ ವಜಾಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ ಸುಪ್ರೀಂಕೋರ್ಟ್ ಕದ ತಟ್ಟಿದ್ದ ಮಾಜಿ ಸಂಸದ ಪ್ರತಾಪ್ ಸಿಂಹಗೆ ನಿರಾಸೆ ಉಂಟಾಗಿದೆ. ಅಷ್ಟೇ ಅಲ್ಲದೇ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದವರನ್ನು ತರಾಟೆಗೆ ತೆಗೆದುಕೊಂಡಿದೆ. ಈ ಹಿಂದೆ ಸಾಹಿತಿ ನಿಸಾರ್ ಅಹಮದ್ ದಸರಾ ಉದ್ಘಾಟಿಸಿರಲಿಲ್ವಾ? ಈ ಅರ್ಜಿ ಸಲ್ಲಿಸಿದ ಔಚಿತ್ಯ ಏನು, ಯಾವ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದೀರಾ? ಇದು ಖಾಸಗಿ ಕಾರ್ಯಕ್ರಮ ಅಲ್ಲ, ಬದಲಾಗಿ ಸರ್ಕಾರಿ ಕಾರ್ಯಕ್ರಮ ಎಂದು ಮೇಲ್ಮನವಿ ಅರ್ಜಿ ಸಲ್ಲಿಸಿದ್ದವರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ : ಜಾತಿಗಣತಿ : ನಾಳೆ ಒಕ್ಕಲಿಗ ನಾಯಕರ ಸಭೆ ಕರೆದ ನಿರ್ಮಲಾನಂದ ಶ್ರೀ.. ಡಿಕೆಶಿ, ಹೆಚ್ಡಿಕೆ, ಆರ್. ಅಶೋಕ್ ಭಾಗಿ ಸಾಧ್ಯತೆ!







