ಬೆಂಗಳೂರು : ಇತಿಹಾಸದಲ್ಲೇ ಮೊದಲ ಬಾರಿಗೆ ಬಿಎಂಟಿಸಿ MD ವಿರುದ್ಧ ಸಿಎಂ ಸಿದ್ದರಾಮಯ್ಯಗೆ ದೂರು ನೀಡಲಾಗಿದೆ. ಕೇವಲ 20 ತಿಂಗಳಲ್ಲಿ 80 ಸಾವುಗಳು ಸಂಭವಿಸಿದ ಹಿನ್ನೆಲೆ ಸಿಎಂ ಸಿದ್ದರಾಮಯ್ಯಗೆ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಸಂಘದ ರಾಜ್ಯಾದ್ಯಕ್ಷ ಜಗದೀಶ್ ಅವರು ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಹೌದು.. ಕೇವಲ 20 ತಿಂಗಳಲ್ಲಿ 80 ಸಾವುಗಳು ಸಂಭವಿಸಿದ್ದು, ಇವೆಲ್ಲಕ್ಕೂ ಬಿಎಂಟಿಸಿ MD ರಾಮಚಂದ್ರನ್ ಅವರೇ ನೈತಿಕ ಹೊಣೆ ಎಂಬ ಆಪಾದನೆ ಕೇಳಿಬಂದಿದೆ. ಬಿಎಂಟಿಸಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಈವರೆಗೆ ಯಾವುದೇ ಸರಿಯಾದ ಪರಿಹಾರ ನೀಡಲು MD ರಾಮಚಂದ್ರನ್ ವಿಫಲವಾಗಿದ್ದು, ಇವರು ಚಾಲಕರ ಸಮಸ್ಯೆಗೂ ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಸಾರಿಗೆ ನೌಕರರ ಸಂಘದ ದೂರಿನಲ್ಲಿ ವಿವರಿಸಲಾಗಿದೆ.

ದೂರಿನಲ್ಲಿ ಏನಿದೆ? ಕಳೆದ 20 ತಿಂಗಳಿನಿಂದ ಈವರೆಗೆ ಬಿಎಂಟಿಸಿ ಬಸ್ಗಳಿಂದ ಅಪಘಾತವಾಗಿ 80 ಜನ ಪ್ರಯಾಣಿಕರು ಮೃತ ಹೊಂದಿದ್ದಾರೆ. ಅಪಘಾತದಲ್ಲಿ ಮೃತ ಹೊಂದಿದ ಪಾದಚಾರಿಗಳಿಗೂ ಹಾಗೂ ಪ್ರಯಾಣಿಕರಿಗೂ ನ್ಯಾಯ ಸಿಗಬೇಕಾಗಿದೆ. ಸಂಸ್ಥೆಯ ವಾಹನಗಳಿಗೆ ಅಳವಡಿಸುವ ಬಿಡಿ ಭಾಗಗಳು ಕಳಪೆ ಗುಣಮಟ್ಟವುದಾಗಿದ್ದು, ಬಿಡಿ ಭಾಗಗಳ ಖರೀದಿಗೆ ಸಂಸ್ಥೆಯ ನಿಯಮದ ಪ್ರಕಾರ ಸಿ.ಆರ್.ಡಿ.ಟಿ ಪೂಣೆ ಈ ಸಂಸ್ಥೆಯಿಂದ ಬಿಡಿ ಭಾಗಗಳ ಪರೀಕ್ಷಾ ವರದಿ (ಎನ್.ಓ.ಸಿ) ಪಡೆಯದೇ ಇರುವ ಬಗ್ಗೆ ಬಹಳಷ್ಟು ಅನುಮಾನಗಳಿದ್ದು, ರಸ್ತೆಯಲ್ಲಿ ಸಂಚರಿಸುತ್ತಿರುವ ಬಿಎಂಟಿಸಿ ವಾಹನಗಳ ಮುಂದಿನ ದೊಡ್ಡ ಗಾಜುಗಳು ಒಡೆದು ಹೋಗಿರುತ್ತವೆ. ಸಂಸ್ಥೆಯ ವಾಹನದ ಸೈಡ್ ಮಿರರ್‌ಗಳು ಹಾಗೂ ವೈಪರ್, ಹಾರನ್‌ಗಳು ಮತ್ತು ಸುಸಜಿತವಾದ ಚಾಲಕರಿಗೆ ಆರಾಮದಾಯಕವಾಗಿ ವಾಹನ ಚಲಾಯಿಸಲು ಚಾಲಕರ ಆಸನಗಳು ಸರಿ ಇರುವುದಿಲ್ಲ. ಚಾಲಕರ ಆಸನಗಳಲ್ಲಿ ಸುರಕ್ಷಿತವಾಗಿ ಚಾಲನೆ ಮಾಡಲು ಸೀಟ್ ಬೆಲ್ಟ್ ಇಲ್ಲದ ಕಾರಣ ಸುರಕ್ಷಿತ ಚಾಲನೆಗೆ ಅನಾನುಕೂಲವಾಗಿ ಈ ಎಲ್ಲಾ ಅಪಘಾತಗಳಿಗೆ ನೇರವಾಗಿ BMTC ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಅವರೇ ಹೊಣೆಗಾರರಾಗಿರುತ್ತಾರೆ ಎಂಬ ಸಾಲು ಸಾಲು ಆರೋಪಗಳು ಕೇಳಿಬಂದಿದೆ.

ಹೀಗಾಗಿ ಈ ಕೂಡಲೇ ಬಿಎಂಟಿಸಿ MD ರಾಮಚಂದ್ರನ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಸಾರಿಗೆ ನೌಕರರ ಸಂಘದ ರಾಜ್ಯಾದ್ಯಕ್ಷ ಜಗದೀಶ್ ಅವರು ಸಿಎಂ ಸಿದ್ದರಾಮಯ್ಯ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿದ್ದು, ಈ ದೂರಿನ ಪ್ರತಿ ಬಿಟಿವಿಗೆ ಲಭ್ಯವಾಗಿದೆ.


ಇದನ್ನೂ ಓದಿ : ನೇಪಾಳ ಧಗ ಧಗ – ಉದ್ರಿಕ್ತರಿಂದ ರಾಜಕೀಯ ನಾಯಕರ ಮನೆಗೆ ಬೆಂಕಿ.. ಮಾಜಿ ಪ್ರಧಾನಿ ಪತ್ನಿ ಸಜೀವ ದಹನ!







