ಲವ್ ಮ್ಯಾರೇಜೂ ಅಲ್ಲದ, ಅರೇಂಜ್ ಮ್ಯಾರೇಜೂ ಅಲ್ಲದ ಪಕ್ಕಾ ಅಗ್ರೀಮೆಂಟ್ ಮ್ಯಾರೇಜ್ ಕತೆಯಲ್ಲಿ ಈಗ ನಾಯಕ ನಿಜವಾಗಲೂ ಯಾರಿಗೆ ‘ಯಜಮಾನ’ ಆಗ್ತಾನೆ ಅನ್ನೋ ಪ್ರಶ್ನೆಯ ಮೇಲೆ ಧಾರಾವಾಹಿ ನಡೀತಿದೆ. ಒಂದುಕಡೆ ರಾಘುವನ್ನ ಅಗ್ರೀಮೆಂಟ್ ಮ್ಯಾರೇಜ್ ಆಗಿರೋ ಅಗರ್ಭ ಶ್ರೀಮಂತೆ ಝಾನ್ಸಿ ತನ್ನ ಪ್ರೀತಿ ಪಡೆಯೋದಕ್ಕೆ, ಎಂತಾ ಕಷ್ಟವನ್ನಾದರೂ ಎದುರಿಸ್ತಾಳೆ, ಇನ್ನೊಂದು ಕಡೆ ಅರೇಂಜ್ ಮ್ಯಾರೇಜ್ ಆಗ್ಬೇಕಾಗಿರೋ ಅನಿತಾಗೆ ಹಸೆಮಣೆ ಮೇಲೆ ಮದುವೆ ನಿಂತಿರೋದು ಆಘಾತವಾಗಿ, ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ.

ಇಬ್ಬರಿಗೂ ತಮ್ಮ ‘ಯಜಮಾನ’ ರಾಘುವೇ ಆಗಬೇಕೆಂಬ ಹಠ. ಈ ಸಮಸ್ಯೆಗೆ ಪರಿಹಾರವಾಗಿ ಮನೆಯವರೆಲ್ಲ ಸೇರಿ ಝಾನ್ಸಿ-ಅನಿತಾ ನಡುವೆ “ನಾನಾ- ನೀನಾ” ಸ್ಪರ್ಧೆ ಏರ್ಪಡಿಸಿದ್ದಾರೆ. ಝಾನ್ಸಿ ಸರಿಯಾದ ರೀತಿಯಲ್ಲಿ ಆಡಿ ಜಯಿಸಿದರೂ, ಎಲ್ಲರೂ ಸೇರಿ ಪೂರ್ವನಿರ್ಧಾರದಂತೆ, ಸೋತರೂ ಅನಿತಾಳದ್ದೇ ಗೆಲುವು ಎಂದು ತೀರ್ಮಾನಿಸುವುದು ಇಲ್ಲಿಯವರೆಗಿನ ಕತೆ.

ದಿನದಿಂದ ದಿನಕ್ಕೆ ಈ ಪಂದ್ಯ ಕುತೂಹಲಕಾರಿಯಾಗಿ ಸಾಗುತ್ತಿದೆ. ಎಷ್ಟೇ ಆದರೂ ಇಡೀ ಕುಟುಂಬ ಅನಿತಾಳ ಬೆಂಬಲಕ್ಕಿದೆ. ರಾಘು ಸೇರಿದಂತೆ ಇನ್ನಿಬ್ಬರಿಗೆ ಮನಸ್ಸಲ್ಲಿ ಝಾನ್ಸಿಯೇ ಗೆಲ್ಲಬೇಕೆಂಬ ಆಸೆಯಿದ್ದರೂ, ಅದನ್ನು ತೋರಿಸಿಕೊಳ್ಳಲು ಅವರ ಪರಿಸ್ಥಿತಿ ಬಿಡುತ್ತಿಲ್ಲ. ಇದೀಗ ಝಾನ್ಸಿಯ ಪ್ರೀತಿಯನ್ನ ಗೆಲ್ಲಿಸೋಕೆ, ಅವಳಿಗೆ ಸಪೋರ್ಟ್ ಸಿಸ್ಟಮ್ ಆಗಿ ಜೊತೆಯಲ್ಲಿ ನಿಲ್ಲೋಕೆ ಕರುನಾಡೇ ಮೆಚ್ಚಿದ, ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಜನ ಮೆಚ್ಚಿದ ಜೋಡಿ ರಾಮಾಚಾರಿ-ಚಾರು ಬರ್ತಿದ್ದಾರೆ. ಯಜಮಾನ-ರಾಮಾಚಾರಿ ಮಹಾಸಂಚಿಕೆ, ಕರುನಾಡಿಗೆ ಮನರಂಜನೆಯ ರಸದೌತಣವನ್ನ ಕೊಡಲು ಸಜ್ಜಾಗಿದೆ.

ಎರಡು ಬ್ಯೂಟಿಫುಲ್ ಜೋಡಿಗಳ ಕ್ಯೂಟ್ ರೊಮ್ಯಾನ್ಸ್, ಎರಡು ಪವರ್‌ಫುಲ್ ಹೀರೋಗಳ ಸಖತ್ ಫೈಟ್, ಎರಡು ಹೀರೋಯಿನ್‌ಗಳ ಇಮೋಷನಲ್ ಸೀನ್ಸ್, ವಿಲನ್‌ಗಳ ಅಟ್ಟಹಾಸ, ಅದನ್ನ ಅಡಗಿಸೋ ಒಳ್ಳೇತನ, ನಾನ್-ಸ್ಟಾಪ್ ನಗು, ‘ನಾನಾ-ನೀನಾ’ ಪಂದ್ಯದ ಕುತೂಹಲ ಹೀಗೆ ಮಹಾಸಂಚಿಕೆ ವಿಶೇಷವಾಗಿ ಮೂಡಿಬರಲಿದೆ. ನಿಜವಾಗ್ಲೂ ಮನೆಯವರ ವೋಟ್ ಪಡೆದು ಮನೆಯ ‘ಸೊಸೆ’ ಪಟ್ಟ ದಕ್ಕಿಸಿಕೊಳ್ಳೋರು ಯಾರು? ‘ಯಜಮಾನ’ನ ಅಸಲೀ ಯಜಮಾನಿ ಆಗೋದ್ಯಾರು? ಮನೆಯಿಂದಾಚೆ ಹೋಗೋರು ಯಾರು ಅನ್ನೋದು ಇಲ್ಲಿ ನಿರ್ಧಾರವಾಗಲಿದೆ.
ಇದನ್ನೂ ಓದಿ : ಮೀಸೆ ಚಿಗುರದ ಉಗ್ರ ಬೆಂಗಳೂರಲ್ಲಿ ಲಾಕ್.. ಸಿಲಿಕಾನ್ ಸಿಟಿಯನ್ನೇ ಸ್ಫೋಟಿಸೋಕೆ ಸ್ಕೆಚ್ ಹಾಕಿದ್ನಾ ಉಗ್ರ?







