ಹೆತ್ತ ಮಗಳಿಂದಲೇ ವೃದ್ದ ತಂದೆಗೆ ನಂಬಿಕೆ ದ್ರೋಹ.. ಬ್ಯಾಂಕಿನ‌ ಸಾಲ ಕ್ಲಿಯರೆನ್ಸ್ ಮಾಡಿಸ್ತೀನಿ ಎಂದು ಸಹಿ ಪಡೆದು ದೋಖಾ!

ಹಾವೇರಿ : ಆಸ್ತಿಗಾಗಿ ಹೆತ್ತ ಮಗಳೇ ವೃದ್ಧ ತಂದೆಗೆ ಮೋಸ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಡೊಳ್ಳೇಸೂರ್ ಗ್ರಾಮದಲ್ಲಿ ನಡೆದಿದೆ. ಬ್ಯಾಂಕಿನ‌ ಸಾಲ ಕ್ಲಿಯರೆನ್ಸ್ ಅಂತೇಳಿ ಸಹಿ ಪಡೆದು ತಂದೆ ಹೆಸರಲ್ಲಿದ್ದ ಜಮೀನನ್ನು ಮಗಳು ಲಪಟಾಯಿಸಿದ್ದು, 80 ವರ್ಷದ ವೃದ್ಧ ಈರಪ್ಪ ಹೆತ್ತ ಮಗಳಿಂದಲೇ ಮೋಸಕ್ಕೊಳಗಾಗಿದ್ದಾರೆ.

ತಂದೆಯ ಮುಪ್ಪಿನ ಕಾಲದ ಉಪಜೀವನಕ್ಕಾಗಿ ಉಳಿಸಿಟ್ಟಿದ್ದ ಒಂದು ಎಕರೆ 10 ಗುಂಟೆ ಜಮೀನನ್ನು ಮಗಳು ಕೆಂಚಮ್ಮ ತಂದೆಯಿಂದ ಮೋಸದಲ್ಲಿ ಸಹಿ ಪಡೆದು ಲಪಟಾಯಿಸಿದ್ದಾಳೆ. ಬ್ಯಾಂಕ್ ಸಾಲ ಕ್ಲಿಯರೆನ್ಸ್‌ಗಾಗಿ ಸಹಿ ಪಡೆಯುವುದಾಗಿ ನಂಬಿಸಿ, ತನ್ನ ತಂದೆಯಿಂದ ಕೆಂಚಮ್ಮ ತನ್ನ ಮಗನ ಹೆಸರಿಗೆ ಆಸ್ತಿಯನ್ನು ರಿಜಿಸ್ಟರ್ ಮಾಡಿಕೊಂಡಿದ್ದಾಳೆ. ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಈರಪ್ಪ, ಜಮೀನು ವಾಪಸ್ ಪಡೆಯಲು ಸದ್ಯ ವಿಷದ ಬಾಟಲಿಯೊಂದಿಗೆ ಕಣ್ಣೀರು ಹಾಕುತ್ತಿದ್ದಾರೆ.

ಈರಪ್ಪ ಒರ್ವ ಪುತ್ರ ಮತ್ತು ಎಂಟು ಹೆಣ್ಣುಮಕ್ಕಳ ತಂದೆಯಾಗಿದ್ದು, ಡೊಳ್ಳೇಸೂರ್ ಗ್ರಾಮದಲ್ಲಿ 8 ಎಕರೆ 10 ಗುಂಟೆ ಜಮೀನಿನ ಮಾಲೀಕರಾಗಿದ್ದರು. ಈ ಆಸ್ತಿಯಲ್ಲಿ 3 ಎಕರೆ ಜಮೀನನ್ನು ತಮ್ಮ ಪುತ್ರನ ಹೆಸರಿಗೆ ರಿಜಿಸ್ಟರ್ ಮಾಡಿದ್ದರು. ಉಳಿದ 4 ಎಕರೆ ಜಮೀನನ್ನು ಎಂಟು ಹೆಣ್ಣುಮಕ್ಕಳಿಗೆ ತಲಾ ಅರ್ಧ ಎಕರೆಯಂತೆ ವಿಂಗಡಿಸಿ ಖಾಗದ ಮಾಡಿದ್ದರು. ತಮ್ಮ ವೃದ್ಧಾಪ್ಯದ ಉಪಜೀವನಕ್ಕಾಗಿ ಒಂದು ಎಕರೆ 10 ಗುಂಟೆ ಅಡಿಕೆ ತೋಟವನ್ನು ತಮ್ಮ ಹೆಸರಿನಲ್ಲಿಯೇ ಉಳಿಸಿಕೊಂಡಿದ್ದರು. ಈ ಜಮೀನಿನಿಂದ ಪ್ರತಿವರ್ಷ ಬೆಳೆ ವಿಮೆಯ ಹಣವು ಈರಪ್ಪನಿಗೆ ಜೀವನಾಧಾರವಾಗಿತ್ತು.

ಈ ಘಟನೆಯು ಡೊಳ್ಳೇಸೂರ್ ಗ್ರಾಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕುಟುಂಬದೊಳಗಿನ ನಂಬಿಕೆಯ ದುರ್ಬಳಕೆ ಮತ್ತು ವೃದ್ಧರ ಮೇಲಿನ ದೌರ್ಜನ್ಯದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿದೆ. ಈರಪ್ಪನಿಗೆ ನ್ಯಾಯ ಒದಗಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ. ಕೆಂಚಮ್ಮನ ವಿರುದ್ಧ ಕಾನೂನು ಕ್ರಮಕ್ಕೆ ಈರಪ್ಪ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಹೆತ್ತ ಮಗನನ್ನೇ ಡೀಸೆಲ್‌ ಸುರಿದು ಬೆಂಕಿ ಹಚ್ಚಿ ಹತ್ಯೆ.. ತಂದೆ-ತಾಯಿ, ಸಹೋದರ ಬಂಧನ!

Btv Kannada
Author: Btv Kannada

Read More