ಬೆಂಗಳೂರು : ಖಗೋಳ ಕೌತುಕಕ್ಕೆ ನಭೋ ಮಂಡಲ ಸಾಕ್ಷಿಯಾಗಿದೆ. ನಿನ್ನೆ ರಾತ್ರಿ ಆಗಸದಲ್ಲಿ ಹಾಲ್ಬೆಳದಿಂಗಳಂತೆ ಕಾಣುತ್ತಿದ್ದ ಚಂದಿರನಿಗೆ ಗ್ರಹಣ ಹಿಡಿದಿತ್ತು. ಸರಿಯಾಗಿ 9 ಗಂಟೆ 57 ನಿಮಿಷಕ್ಕೆ ಖಗ್ರಾಸ ಚಂದ್ರಗ್ರಹಣ ಶುರುವಾಗಿದ್ದು, 3 ಗಂಟೆ 29 ನಿಮಿಷಗಳ ಕಾಲ ಸುದೀರ್ಘವಾಗಿ ಚಂದ್ರ ತನ್ನ ಬಣ್ಣ ಬದಲಿಸುತ್ತಾ ಸಾಗಿದ್ದಾನೆ.

ವರ್ಷದ 2ನೇ ಮತ್ತು ಕೊನೆಯ ಚಂದ್ರಗ್ರಹಣಕ್ಕೆ ಇಡೀ ವಿಶ್ವ ಸಾಕ್ಷಿಯಾಗಿದ್ದು, ಚಂದ್ರನ ಹೆಚ್ಚಿನ ಭಾಗ ಭೂಮಿಯ ನೆರಳು ಆವರಿಸಿದಾಗ ಚಂದ್ರ ಕೆಂಪು ಬಣ್ಣದಲ್ಲಿ ಕಾಣಿಸಿದ್ದಾನೆ. ಭಾರತದಲ್ಲಿ ಚಂದ್ರಗ್ರಹಣ ಮೊದಲಿಗೆ ಲಡಾಖ್‌ನಲ್ಲಿ ಗೋಚರಿಸಿದ್ದು, ಟರ್ಕಿ, ಸೈಪ್ರಸ್, ಇಂಡೋನೇಷ್ಯಾದ ಜಕಾರ್ತ, ಆಸ್ಟ್ರೇಲಿಯಾ ಸಿಡ್ನಿ, ಚೀನಾದ ಬೀಜಿಂಗ್, ದುಬೈನಲ್ಲಿ ಶ್ವೇತ ವರ್ಣದ ಚಂದಿರ ಕೆಂಬಣ್ಣದಲ್ಲಿ ಗೋಚರಿಸಿದೆ.
ಇನ್ನೂ ಬೆಂಗಳೂರಿನಲ್ಲಿ ಆರಂಭದ ಒಂದು ಗಂಟೆ ಕಳೆದರೂ ಮೋಡದ ಮರೆಯಲ್ಲಿ ಆಟವಾಡುತ್ತಿದ್ದ ಚಂದಿರ ಬಳಿಕ ಕಿತ್ತಳೆ ಬಣ್ಣ, ನಂತರ ರಕ್ತ ರೂಪಕ್ಕೆ ತಿರುಗಿದ್ದಾನೆ. ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು, ವಯೋವೃದ್ಧರು, ಕುಟುಂಬ ಸಮೇತ ಆಗಮಿಸಿ ತಾರಾಲಯದಲ್ಲಿ ಕಣ್ತುಂಬಿಕೊಂಡಿದ್ದಾರೆ. ಮತ್ತೊಂದ್ಕಡೆ ಕೋರಮಂಗಲದ ಭಾರತೀಯ ಖಗೋಳ ಭೌತ ವಿಜ್ಞಾನ ಸಂಸ್ಥೆಯಲ್ಲೂ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಜನರು ಗ್ರಹಣ ವೀಕ್ಷಣೆ ಮಾಡಿ ಖಗೋಳ ಕೌತುಕ ಕಣ್ತುಂಬಿಕೊಂಡಿದ್ದಾರೆ.
ಇದನ್ನೂ ಓದಿ : 17 ವಜ್ರದುಂಗುರ, 24ಕೆಜಿಗೂ ಅಧಿಕ ಚಿನ್ನ.. ವೀರೇಂದ್ರ ಪಪ್ಪಿ ಬ್ಯಾಂಕ್ ಲಾಕರ್ನಲ್ಲಿದ್ದ ಅಕ್ರಮ ಆಸ್ತಿ ಕಂಡು ದಂಗಾದ ED ಅಧಿಕಾರಿಗಳು!







