ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಗುಂಪುಗಳ ಮಧ್ಯೆ ಘರ್ಷಣೆ, ಕಲ್ಲು ತೂರಾಟ – 8 ಮಂದಿಗೆ ಗಾಯ.. ಸ್ಥಳದಲ್ಲಿ ಬಿಗುವಿನ ವಾತಾವರಣ!

ಮಂಡ್ಯ : ಮದ್ದೂರು ಪಟ್ಟಣದ ರಾಮ್ ರಹೀ ನಗರದಲ್ಲಿ ಭಾನುವಾರ ರಾತ್ರಿ ಗಣೇಶನ ವಿಸರ್ಜನೆ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ 8 ಮಂದಿಗೆ ಗಾಯಗಳಾಗಿದ್ದು, ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಮದ್ದೂರು ಪಟ್ಟಣದಲ್ಲಿ ಪ್ರಕ್ಷುದ್ಧ ವಾತಾವರಣ ನಿರ್ಮಾಣವಾಗಿದೆ.

ಮದ್ದೂರು ಪಟ್ಟಣದ ಸಿದ್ಧಾರ್ಥ ನಗರ 5ನೇ ಕ್ರಾಸ್ ನಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮದ ಮೆರವಣಿಗೆ ವೇಳೆ ಈ ಘಟನೆ ಸಂಭವಿಸಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ನಡುವೆ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಮೆರವಣಿಗೆಯಲ್ಲಿದ್ದ ಕೆಲವು ಕಿಡಿಗೇಡಿಗಳು ತಿಂಗಳಿಂದಷ್ಟೇ ಉದ್ಘಾಟನೆಯಾಗಿದ್ದ ಮಸೀದಿ ಮೇಲೆ ಕಲ್ಲು ಎಸೆದಿದ್ದಾರೆ ಎನ್ನಲಾಗಿದೆ.

ಈ ವೇಳೆ ಎರಡು ಎರಡು ಗುಂಪುಗಳ ನಡುವೆ ಮಾತಿನ ಚಕಮಕಿಯೊಂದಿಗೆ ಕಲ್ಲು ತೂರಾಟ ನಡೆದಿದೆ. ಕೆಲ ಹೊತ್ತಿನಲ್ಲೇ ಇದು ರಾಜಕೀಯ ಬಣ್ಣ ಪಡೆದುಕೊಂಡಿದೆ. ಬಿಜೆಪಿ, ಆರ್.ಎಸ್.ಎಸ್., ಬಜರಂಗದಳ ಕಾರ್ಯಕರ್ತರು ಕೂಡ ಅಲ್ಲಿ ಜಮಾಯಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಜತೆಗೆ ಜಿಲ್ಲೆಯ ಇತರ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಂಡು ಬಂದೋಬಸ್ತ್ ಹಾಕಿದ್ದಾರೆ.

ಘಟನೆ ಬೆನ್ನಲ್ಲೇ ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಇ. ತಿಮ್ಮಯ್ಯ, ಎಸ್.ಈ. ಗಂಗಾಧರಸ್ವಾಮಿ ಅವರು ಸ್ಥಳಕ್ಕೆ ಆಗಮಿಸಿ ಎರಡು ಗುಂಪಿನೊಂದಿಗೆ ಸಮಾಲೋಚಿಸಿ ಸಮಾಧಾನಪಡಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ತಹಬದಿಗೆ ಬಂದಿದ್ದರೂ, ಸ್ಥಳದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಸ್ಥಳದಲ್ಲಿ ನಿಷೇಧಾಜ್ಞೆ ಜಾರಿ‌ ಮಾಡಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಇದನ್ನೂ ಓದಿ : ಜಪಾನ್ ಪ್ರಧಾನಿ ಶಿಗೇರು ಇಶಿಬಾ ರಾಜೀನಾಮೆ!

Btv Kannada
Author: Btv Kannada

Read More