ಮಹೇಶ್ ಶೆಟ್ಟಿ ತಿಮರೋಡಿ ಬಂಧನ.. ಬ್ರಹ್ಮಾವರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ!

ಉಡುಪಿ : ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ಸರಹದ್ದಿನ 500 ಮೀಟರ್ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ 1 ಗಂಟೆಯಿಂದ ನಾಳೆ (ಆ.22) ಮಧ್ಯಾಹ್ನ 1 ಗಂಟೆಯ ತನಕ ನಿಷೇಧಾಜ್ಷೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಆದೇಶ ಹೊರಡಿಸಿದ್ದಾರೆ.

ಉಡುಪಿ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿರುತ್ತದೆ. ಈ ಹಿನ್ನಲೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡದಂತೆ ಸೂಕ್ತ ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿ ಸ್ವರೂಪ .ಟಿ.ಕೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರಡಿ ಆದೇಶವನ್ನು ಹೊರಡಿಸಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದೇಕೆ? ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನ ಇಂದು ಬೆಳಗ್ಗೆ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.  ರಾಜೀವ್‌ ಕುಲಾಲ್‌ ಅವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ BSN 196 (1), 352, 353 (2) ಸೆಕ್ಷನ್‌ಗಳ ಅಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಪ್ರಕರಣ ದಾಖಲಾಗಿತ್ತು. ಭಾರೀ ಹೈಡ್ರಾಮಾದ ಬಳಿಕ ಪೊಲೀಸರು ಇದೀಗ ಮಹೇಶ್ ಶೆಟ್ಟಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ತಮ್ಮ ಫೇಸ್ಬುಕ್ ಪೇಜ್‌ನಲ್ಲಿ ಬಿ.ಎಲ್. ಸಂತೋಷ್ ಅವರನ್ನು ನಿಂದಿಸಿ ತೇಜೋವಧೆ ಮಾಡುವಂತಹ ಪೋಸ್ಟ್ ಹಾಕಿದ್ದಾರೆ, ಹಿಂದೂ ಧರ್ಮದ ನಾಯಕರ ಬಗ್ಗೆ ಅವಹೇಳನಕಾರಿ ಶಬ್ದಗಳನ್ನು ಬಳಸಿಕೊಂಡು ಧರ್ಮ ಮತ್ತು ಸಮುದಾಯಗಳ ನಡುವೆ ವೈಮನಸ್ಸು ಹುಟ್ಟಿಸುವ ಪ್ರಯತ್ನ ಮಾಡಿದ್ದಾರೆ ಎಂದು ರಾಜೀವ್ ಕುಲಾಲ್ ಗಂಭೀರ ಆರೋಪ ಮಾಡಿ ತಿಮರೋಡಿ ವಿರುದ್ದ ದೂರು ದಾಖಲಿಸಿದ್ದರು.

ಇದನ್ನೂ ಓದಿ : ‘ಸ್ಪಾರ್ಕ್’ ಟೀಸರ್ ರಿಲೀಸ್.. ಸತ್ಯಕ್ಕಾಗಿ ಹೋರಾಟಕ್ಕಿಳಿದ ನಿರಂಜನ್ ಸುಧೀಂದ್ರ!

Btv Kannada
Author: Btv Kannada

Read More