ಬೆಂಗಳೂರು : ದೇಶ-ವಿದೇಶಗಳಲ್ಲಿ ಭಾರೀ ಸದ್ದು ಮಾಡ್ತಿರುವ ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಆರೋಪ ಪ್ರಕರಣ ದಿನದಿಂದ ದಿನಕ್ಕೆ ಹಲವು ಸಂಘರ್ಷಗಳಿಗೆ ಕಾರಣವಾಗ್ತಿದೆ. ಅನಾಮಿಕ ನೀಡಿರುವ ದೂರು ಆಧರಿಸಿ SIT ಪೊಲೀಸರು ತನಿಖೆಯನ್ನು ಮಾಡಿದ್ದು, ಈವರೆಗೆ ಆತ ತೋರಿಸಿದ 2 ಜಾಗದಲ್ಲಿ ಮಾತ್ರ ಅಸ್ಥಿಪಂಜರಗಳು ಸಿಕ್ಕಿದೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ನಿನ್ನೆ ಸದನದಲ್ಲಿ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಹಿಂದೂ ಪುಣ್ಯಕ್ಷೇತ್ರಗಳನ್ನು ಟಾರ್ಗೆಟ್ ಮಾಡಲಾಗ್ತಿದೆ, ಧರ್ಮಸ್ಥಳವನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂದು ಬಿಜೆಪಿ ನಾಯಕರು, ದೇಗುಲದ ಭಕ್ತರು ಆರೋಪಿಸುತ್ತಿದ್ದು, ಈ ಬಗ್ಗೆ ಪರ-ವಿರೋಧದ ಚರ್ಚೆ ಸಾಕಷ್ಟು ನಡೆಯುತ್ತಿದೆ.
ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ರಾಜೀವ್ ಕುಲಾಲ್ ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು FIR ದಾಖಲಿಸಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ಅವರು ತಮ್ಮ ಫೇಸ್ಬುಕ್ ಪೇಜ್‌ನಲ್ಲಿ ಬಿ.ಎಲ್. ಸಂತೋಷ್ ಅವರನ್ನು ನಿಂದಿಸಿ ತೇಜೋವಧೆ ಮಾಡುವಂತಹ ಪೋಸ್ಟ್ ಹಾಕಿದ್ದಾರೆ, ಹಿಂದೂ ಧರ್ಮದ ನಾಯಕರ ಬಗ್ಗೆ ಅವಹೇಳನಕಾರಿ ಶಬ್ದಗಳನ್ನು ಬಳಸಿಕೊಂಡು ಧರ್ಮ ಮತ್ತು ಸಮುದಾಯಗಳ ನಡುವೆ ವೈಮನಸ್ಸು ಹುಟ್ಟಿಸುವ ಪ್ರಯತ್ನ ಮಾಡಿದ್ದಾರೆ ಎಂದು ರಾಜೀವ್ ಕುಲಾಲ್ ಗಂಭೀರ ಆರೋಪ ಮಾಡಿದ್ದಾರೆ.

ಸದ್ಯ ದೂರು ಸ್ವೀಕರಿಸಿದ ಬ್ರಹ್ಮಾವರ ಪೊಲೀಸರು, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ 196(1), 352, 353(2)ರ ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯ ಶಬ್ದಗಳು ಮತ್ತು ಸಮುದಾಯ ವಿರೋಧಿ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆ, ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಶಬ್ದ ಬಳಸಿ ನಿಂದನೆ ಮಾಡಿದ ಆರೋಪದ ಹಿನ್ನೆಲೆ ಮಹೇಶ್ ಶೆಟ್ಟಿ ತಿಮರೋಡಿಗೆ ಕಾನೂನು ಕಂಟಕ ಎದುರಾಗಿದೆ.

ಇದನ್ನೂ ಓದಿ : ಹೊಸೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್ – 40 ಮಂದಿಗೆ ಗಾಯ.. ಮೂವರ ಸ್ಥಿತಿ ಚಿಂತಾಜನಕ!







