MLA ಬೈರತಿ ಬಸವರಾಜ್​ಗೆ ಹಿನ್ನಡೆ – ಬಿಕ್ಲು ಶಿವ ಕೇಸ್​ನ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ!

ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವನ ಹತ್ಯೆ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೆ.ಆರ್ ಪುರಂ ಶಾಸಕ ಬೈರತಿ ಬಸವರಾಜ್​ಗೆ ಪೊಲೀಸರು ನೋಟಿಸ್ ನೀಡಿದ್ದರು. ಈ ನೋಟಿಸ್ ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ್ದ ಬೈರತಿ ಬಸವರಾಜ್​ಗೆ ಹಿನ್ನಡೆಯಾಗಿದೆ.

ಇಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಕುಮಾರ್ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ವಾದ ಪ್ರತಿವಾದ ಆಲಿಸಿದ ಬಳಿಕ ಹೈಕೋರ್ಟ್ ಬೈರತಿ ಬಸವರಾಜ್​ಗೆ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ನಾಳೆ ಬೆಳಗ್ಗೆ 11:30ಕ್ಕೆ ಬೈರತಿ ಬಸವರಾಜ್ ವಿಚಾರಣೆಗೆ ಹಾಜರಾಗಬೇಕು. ಪೊಲೀಸರು ಕಾನೂನು ಪ್ರಕಾರ ನಡೆದುಕೊಳ್ಳಬೇಕು, ಸುಪ್ರೀಂಕೋರ್ಟ್ ಆದೇಶ ಕ್ರಮಕೈಗೊಳ್ಳಬೇಕು ಎಂದು ಹೈಕೋರ್ಟ್​ ತಿಳಿಸಿದೆ.

ಸರ್ಕಾರದ ಪರವಾಗಿ ಎಸ್​ಪಿಪಿ ಬೆಳ್ಳಿಯಪ್ಪ ವಾದ ಮಂಡಿಸಿ, ಪ್ರಕರಣದಲ್ಲಿ ತನಿಖೆ ಮಾಡಬೇಕು. ಆದಷ್ಟು ಬೇಗ ತನಿಖೆ ಮಾಡಿ ಕೊಲೆ ಪ್ರಕರಣದಲ್ಲಿ ಮಾಹಿತಿ ಸಂಗ್ರಹಿಸಬೇಕು. ಅರೆಸ್ಟ್ ಮಾಡದೆ ವಿಚಾರಣೆ ನಡೆಸಿ ಎಂದರೆ ಹೇಗೆ. ಆರೋಪ ಕೇಳಿ ಬಂದಿರೋದು ಓರ್ವ MLA ವಿರುದ್ಧ, ಅವರ ವಿರುದ್ಧ ಸಾಕ್ಷ್ಯಗಳು ಇದ್ದರೆ ಮುಂದಿನ ಕ್ರಮ ಆಗುತ್ತೆ. ಆದರೆ‌ ಇನ್ನೂ ತನಿಖೆ ನಡೆಸಲಾಗ್ತಿದೆ, ತನಿಖೆಯ ಭಾಗವಾಗಿ ಏನು ನಡೆಯಬೇಕು ಅದು ನಡೆಯಲಿ ಎಂದಿದ್ದಾರೆ.

ನಂತರ ಬೈರತಿ ಬಸವರಾಜ್ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದಾರೆ. ಜುಲೈ 15ರಂದು ಶಿವಪ್ರಕಾಶ್ ಕೊಲೆ ಆಗಿದೆ, ಆತ ಓರ್ವ ರೌಡಿಶೀಟರ್, ಆತನ ವಿರುದ್ಧ ಹಲವು ಕ್ರಿಮಿನಲ್ ಕೇಸ್ ಗಳಿವೆ. ಘಟನೆ ಸಂಬಂಧ ಮೃತನ ತಾಯಿ ದೂರು ನೀಡಿದ್ದಾರೆ, ಈ ಪ್ರಕರಣದಲ್ಲಿ ತಾಯಿಯೂ ಸಾಕ್ಷಿ ಆಗಿದ್ದಾರೆ. ಏಳೆಂಟು ಜನ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ ಎಂದು ಹೇಳಿಕೆ ನೀಡಿದ್ರು. ಜಮೀನಿನ‌ ವಿಚಾರವಾಗಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ ಎಂದಿದ್ದಾರೆ. ವಾದ ಪ್ರತಿವಾದ ಆಲಿಸಿದ ಬಳಿಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಕುಮಾರ್ ಪೀಠ ಬೈರತಿ ಬಸವರಾಜ್​ ತನಿಖೆಗೆ ಹಾಜರಾಗುವಂತೆ ಆದೇಶ ನೀಡಿದೆ.

ಇದನ್ನೂ ಓದಿ : ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ‘ಜೂನಿಯರ್‌’ ಗ್ರ್ಯಾಂಡ್‌ ರಿಲೀಸ್ – ಎಲ್ಲೆಡೆ ಹೌಸ್​ಫುಲ್.. ಕಿರೀಟಿ ಡ್ಯಾನ್ಸ್, ಅಭಿನಯಕ್ಕೆ ಫುಲ್ ಮಾರ್ಕ್ಸ್!

Btv Kannada
Author: Btv Kannada

Read More