ಸಿಲಿಕಾನ ಸಿಟಿ ಬೆಂಗಳೂರಿಗೆ ಹೈಪರ್‌ಲೂಪ್‌, ಪಾಡ್‌ ಟ್ಯಾಕ್ಸಿ ಶೀಘ್ರ – ನಿತಿನ್​​​ ಗಡ್ಕರಿ!

ರಾಂಚಿ : ಅತಿ ಹೆಚ್ಚು ಜನದಟ್ಟಣೆ, ಸಂಚಾರ ದಟ್ಟಣೆ ಇರುವ ಮಹಾನಗರಗಳಾದ ಬೆಂಗಳೂರು, ದೆಹಲಿಯಲ್ಲಿ ಹೈಪರ್‌ಲೂಪ್‌, ಮೆಟ್ರಿನೋ ಪಾಡ್‌ ಟ್ಯಾಕ್ಸಿ, ಮತ್ತು ಪಿಲ್ಲರ್‌ ಆಧಾರಿತ ಸಮೂಹ ಸಾರಿಗೆ ವ್ಯವಸ್ಥೆ ಹಾಗೂ 135 ಸೀಟುಗಳ ವಿದ್ಯುತ್‌ಚಾಲಿತ ತ್ವರಿತ ಸಮೂಹ ಸಾರಿಗೆ ಬಸ್‌ ಪರಿಚಯಿಸಲು ಉದ್ದೇಶಿಸಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು, ಮುಂದಿನ ತಲೆಮಾರಿನ ಸಮೂಹ ಸಾರಿಗೆ ವ್ಯವಸ್ಥೆಯ ಕುರಿತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಗುರಿಯನ್ನು ಬಹಿರಂಗಪಡಿಸಿದ್ದಾರೆ. ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಎಲೆಕ್ಟ್ರಿಕ್‌ ತುರ್ತು ಸಾರಿಗೆ ಯೋಜನೆಗಳ ಕುರಿತು ವಿವರ ನೀಡಿದ ಅವರು, ಸದ್ಯ 135 ಸೀಟ್‌ನ ಎಲೆಕ್ಟ್ರಿಕ್‌ ಸಾರಿಗೆ ಬಸ್‌ ನಾಗ್ಪುರದಲ್ಲಿ ಪ್ರಾಯೋಗಿಕವಾಗಿ ಸಂಚರಿಸುತ್ತಿದೆ. ಈ ಪರೀಕ್ಷೆ ಪೂರ್ಣಗೊಂಡರೆ ಬೆಂಗಳೂರು-ಚೆನ್ನೈ, ದೆಹಲಿ-ಚಂಡೀಗಢ, ದೆಹಲಿ-ಡೆಹ್ರಾಡೂನ್‌, ದೆಹಲಿ-ಮೀರತ್‌, ದೆಹಲಿ-ಜೈಪುರ, ಮುಂಬೈ-ಪುಣೆ, ಮುಂಬೈ-ಔರಂಗಾಬಾದ್‌ ಮತ್ತು ಇತರೆ ನಗರಗಳ ನಡುವೆಯೂ ಪರಿಚಯಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರಿಗೆ ಏನೇನು?

ಪಾಡ್‌ ಟ್ಯಾಕ್ಸಿ : ಮೋನೋ ರೈಲಿನ ಮಾದರಿಯ ಆದರೆ ಕಡಿಮೆ ಪ್ರಯಾಣಿಕರು ಸಂಚರಿಸುವ ವ್ಯವಸ್ಥೆ. ಇದು ಸಣ್ಣ ಕಾರಿನ ರೀತಿ ಇರುತ್ತದೆ. 2ರಿಂದ 6 ಜನ ಕೂರಬಹುದು. ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಲಿಸಲಿದೆ.

ಪಾಡ್‌ ಟ್ಯಾಕ್ಸಿ
ಪಾಡ್‌ ಟ್ಯಾಕ್ಸಿ

ಹೈಪರ್‌ಲೂಪ್‌ : ನಿರ್ವಾತ ಪ್ರದೇಶದಲ್ಲಿ ಸಾಗಬಲ್ಲ ಶರವೇಗದ ಮಿನಿರೈಲು. 1200 ಕಿ.ಮೀ. ವೇಗ ಸಾಧ್ಯ. ನೆಲ, ನೆಲದಾಳ ಅಥವಾ ಆಗಸದಲ್ಲಿ ಇದಕ್ಕೆ ವಿಶೇಷ ವ್ಯವಸ್ಥೆ ಬೇಕು. ವಿಶ್ವದಲ್ಲಿ ಎಲ್ಲೂ ಇಂಥ ಸೇವೆ ಇಲ್ಲ. ಗಂಟೆಗೆ 700-1200 ಕಿ.ಮೀ. ವೇಗದವರೆಗೆ ಸಂಚರಿಸಬಲ್ಲ ಸಾಮರ್ಥ್ಯ ಇದಕ್ಕಿದೆ. ಇದುವರೆಗೆ ವಿಶ್ವದಲ್ಲಿ ಎಲ್ಲೂ ಇಂಥ ವ್ಯವಸ್ಥೆ ಜಾರಿಯಾಗಿಲ್ಲ. ದೂರ ಪ್ರಯಾಣಕ್ಕೆ ಹೆಚ್ಚಿನ ಅನುಕೂಲಾಗಲಿದೆ.

ಹೈಪರ್‌ಲೂಪ್‌
ಹೈಪರ್‌ಲೂಪ್‌

ದೈತ್ಯ ಇ-ಬಸ್‌ : ಮೆಟ್ರೋ ರೀತಿಯಲ್ಲಿ 3 ಬೋಗಿ ಹೊಂದಿರುವ ಎಲೆಕ್ಟ್ರಿಕ್‌ ಬಸ್‌. ಗಂಟೆಗೆ 125 ಕಿ.ಮೀ. ವೇಗದಲ್ಲಿ ಓಡುವ ಬಸ್‌ ಇದು. ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಸಂಚಾರ ಉದ್ದೇಶಿಸಲಾಗಿದೆ. ಬಸ್​ ಓಡಾಟಕ್ಕೆ ಡೀಸೆಲ್‌ ಬಸ್‌ಗಿಂತ ಶೇ.30ರಷ್ಟು ಕಡಿಮೆ ವೆಚ್ಚ. ಪರಿಸರ ಮಾಲಿನ್ಯವೂ ಕಡಿಮೆ. ಬಸ್‌ಗಳು ವೈರ್‌ಲೆಸ್‌ ಚಾರ್ಜಿಂಗ್ ವ್ಯವಸ್ಥೆ ಹೊಂದಿರಲಿದ್ದು, 30 ನಿಮಿಷಕ್ಕೆ ಪೂರ್ಣ ರೀಚಾರ್ಜ್‌ ಸಾಧ್ಯ.

ಇದನ್ನೂ ಓದಿ : ಎಡ್ಜ್​ಬಾಸ್ಟನ್​ನಲ್ಲಿ ಭಾರತಕ್ಕೆ ಐತಿಹಾಸಿಕ ಜಯ.. ಆಕಾಶ್‌ ದೀಪ್‌ ಮಾರಕ ಬೌಲಿಂಗ್‌ ದಾಳಿಗೆ ಆಂಗ್ಲರು ಧೂಳಿಪಟ!

Btv Kannada
Author: Btv Kannada

Read More