ಬೆಂಗಳೂರು : ಪಶ್ಚಿಮ ಘಟ್ಟಗಳಲ್ಲಿ ಎರಡು ದಶಕದಿಂದ ಬೇರೂರಿದ್ದ 6 ನಕ್ಸಲರು ಸರ್ಕಾರದ ಮುಂದೆ ಶರಣಾಗಿದ್ದು, ಇವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಕ್ಸಲರ ಶರಣಾಗತಿ ನಂತ್ರ ನ್ಯಾಯದ ಪ್ರಕ್ರಿಯೆ ಶುರುವಾಗಿದ್ದು, 6 ಜನರನ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಎನ್‌ಐಎ ವಿಶೇಷ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಒಟ್ಟು 14 ದಿನಗಳ ಕಾಲ ಅಂದ್ರೆ ಜನವರಿ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಂಗ ಬಂಧನ ಬೆನ್ನಲ್ಲೆ ನಕ್ಸಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಇನ್ನು ನಕ್ಸಲರು ಶರಣಾಗತರಾದರೂ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳು ಎಲ್ಲಿ ಹೋಯಿತು? ಶರಣಾಗುವಾಗ ಯಾವ ಕಾರಣಕ್ಕೆ ಶಸ್ತ್ರಾಸ್ತ್ರ ಸಲ್ಲಿಕೆ ಮಾಡಿಲ್ಲ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ವಿಪಕ್ಷ ಬಿಜೆಪಿ ಸಹ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸುತ್ತಲೇ ಇತ್ತು. ಇದೀಗ ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಕಾಡಿನಲ್ಲಿ ಪತ್ತೆಯಾಗಿದೆ. ಶೃಂಗೇರಿ ಬಳಿಯ ಕಿತ್ತಲೇಗಂಡಿ ಕಾಡಿನಲ್ಲಿ AK 56, 303 ಸೇರಿ 6 ಗನ್ಗಳು, 100ಕ್ಕೂ ಹೆಚ್ಚು ಗುಂಡುಗಳು ಪತ್ತೆಯಾಗಿವೆ.
ಆದ್ರೆ ಗನ್ಗಳು ಯಾರದ್ದು ಎಂಬುದು ಸ್ಪಷ್ಟವಾಗಿಲ್ಲ ಎಂದು FIRನಲ್ಲಿ ನಮೂದು ಮಾಡಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ನಕ್ಸಲರು ಕೊನೆಯಬಾರಿಗೆ ಸಭೆ ನಡೆಸಿದ್ದ ಸ್ಥಳದಲ್ಲೇ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ನಕ್ಸಲರು ಶರಣಾಗತಿ ವೇಳೆ ಶಸ್ತ್ರಾಸ್ತ್ರ ಹಸ್ತಾಂತರವಾಗ ಬಗ್ಗೆ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಕಳೆದ ಎರಡು ದಿನಗಳಿಂದ ಕಾಡಿನಲ್ಲಿ ಹುಡುಕಾಟ ನಡೆಸಿ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದೆ.
ಇದನ್ನೂ ಓದಿ : ಕಾಂಟ್ರಾಕ್ಟರ್ ಸಚಿನ್ ಸೂಸೈಡ್ ಕೇಸ್ – ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿ ಐವರ ಬಂಧನ!