ನವದೆಹಲಿ : ಪಾಕಿಸ್ತಾನದ ಸೊಕ್ಕನ್ನು ಮುರಿದ ಕಾರ್ಗಿಲ್ ವಿಜಯ ದಿವಸಕ್ಕೆ ಇಂದು 25 ವರ್ಷ. ಇಂದು 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಸ್ಮರಿಸುವ ದಿನ. ಕಾರ್ಗಿಲ್, ಲಡಾಖ್‌ನಲ್ಲಿ ಈ ಹಿಂದೆ ಪಾಕಿಸ್ತಾನಿ ಪಡೆಗಳಿಂದ ವಶಪಡಿಸಿಕೊಂಡಿದ್ದ ಆಯಕಟ್ಟಿನ ಪ್ರಮುಖ ಪ್ರದೇಶವನ್ನು ಭಾರತೀಯ ಸೇನೆಯು ಪುನಃ ಪಡೆದುಕೊಂಡ ದಿನ.
ಈ ದಿನವು ದೇಶದ ಸಾರ್ವಭೌಮತ್ವವನ್ನು ಶೌರ್ಯದಿಂದ ರಕ್ಷಿಸಿದ ಭಾರತೀಯ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು, ಅವರ ಬಲಿದಾನವನ್ನು ಕೊಂಡಾಡುವ ಹಾಗೂ ಭಾರತೀಯರೆಲ್ಲರೂ ಹೆಮ್ಮೆಯಿಂದ ಸ್ಮರಿಸುವ ದಿನವಾಗಿದೆ.
ಕಾರ್ಗಿಲ್ ವಿಜಯ ದಿನದ ಮಹತ್ವ : ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ 527 ಸೈನಿಕರು ಹುತಾತ್ಮರಾದ ಕಾರಣ ಭಾರತವು ಈ ದಿನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಅವರ ಬಲಿದಾನದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಇಂದು ಕಾರ್ಗಿಲ್ ವಿಜಯದ 25ನೇ ವಾರ್ಷಿಕೋತ್ಸವದ ಗೌರವಾರ್ಥವಾಗಿ, ಭಾರತೀಯ ವಾಯುಪಡೆಯು ಇದೇ ಜುಲೈ 12 ರಿಂದ ಇಂದಿನವರೆಗೆ ಏರ್ಫೋರ್ಸ್ ಸ್ಟೇಷನ್ ಸರ್ಸಾವಾದಲ್ಲಿ ‘ಕಾರ್ಗಿಲ್ ವಿಜಯ್ ದಿವಸ್ ರಜತ್ ಜಯಂತಿ’ ಸ್ಮರಣಾರ್ಥವನ್ನು ಆಚರಿಸುತ್ತಿದೆ.
ಪ್ರಧಾನಿ ಮೋದಿ ಭೇಟಿ : ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಲಡಾಕ್ ನಲ್ಲಿರುವ ಡ್ರಾಸ್ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಕಾರ್ಗಿಲ್ ಯುದ್ಧದಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ವೀರರಿಗೆ ಗೌರವ ಸಲ್ಲಿಸಿದ್ದಾರೆ.
ಇನ್ನು ಪ್ರಧಾನಿ ಮೋದಿ ಇಂದು ವಿಶ್ವದ ಅತಿ ಎತ್ತರದ ಪ್ರದೇಶದಲ್ಲಿನ ಸುರಂಗ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ವರ್ಚುವಲ್ ಮೂಲಕ ಶಿಂಕುನ್ ಲಾ ಸುರಂಗ ಯೋಜನೆಗೆ ಚಾಲನೆ ನೀಡಲಿದ್ದು, 4.1 ಕಿ.ಮೀ. ಉದ್ದದ ಈ ಜೋಡಿ-ಟ್ಯೂಬ್ ಸುರಂಗವನ್ನು ಲೇಹ್‌ಗೆ ಸರ್ವಋತು ಸಂಪರ್ಕ ಒದಗಿಸಲು ನಿಮು-ಪಡುಮ್-ದರ್ಚಾ ರಸ್ತೆಯಲ್ಲಿ 15,800 ಅಡಿ ಎತ್ತರದಲ್ಲಿ ನಿರ್ಮಿಸಲಾಗುತ್ತದೆ. ಒಮ್ಮೆ ಇದು ಪೂರ್ಣಗೊಂಡರೆ, ಇದು ವಿಶ್ವದ ಅತಿ ಎತ್ತರದ ಸುರಂಗವಾಗಲಿದೆ.
ಇದನ್ನೂ ಓದಿ : ಏಷ್ಯಾಕಪ್ : ಇಂದು ಭಾರತ vs ಬಾಂಗ್ಲಾ ನಡುವೆ ಸೆಮಿಫೈನಲ್ ಫೈಟ್ – ಪಂದ್ಯ ಎಷ್ಟು ಗಂಟೆಗೆ ಆರಂಭ?