ಬೆಂಗಳೂರು : ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂದು ಜಾಗೃತಿ ಮೂಡಿಸಿದರೂ ಕೂಡಾ ಅದೆಷ್ಟೋ ಕಡೆ ಇಂದಿಗೂ ಜನರು ತಮ್ಮ ಕೆಲಸ ಆಗ್ಬೇಕು ಅಂದ್ರೆ ಅಧಿಕಾರಿಗಳಿಗೆ ಲಂಚ ಕೊಡ್ಬೇಕಾದ ಪರಿಸ್ಥಿತಿ ಇದೆ. ಅದೇ ರೀತಿ ಒಳಗೊಳಗೆ ಅಡ್ಜಸ್ಟ್ ಮಾಡಿಕೊಂಡು ನೂರಾರು ಕೋಟಿ ಲೂಟಿ ಮಾಡಿತ್ತಿದ್ದ ತುಮಕೂರಿನ ಚಿಕ್ಕನಾಯಕನಹಳ್ಳಿಯ ಭ್ರಷ್ಟ ಸಬ್ ರಿಜಿಸ್ಟ್ರಾರ್ ರಾಘವೇಂದ್ರ ಒಡೆಯರ್ನ್ನು ಇದೀಗ ಸರ್ಕಾರ ಸೇವೆಯಿಂದಲೇ ಕಿಕೌಟ್ ಮಾಡಿ ಆದೇಶಿಸಿದೆ.
BTVಯ ನಿರಂತರ ಹೋರಾಟಕ್ಕೆ ಕೊನೆಗೂ ಭಾರೀ ಗೆಲುವು ಸಿಕ್ಕಿದೆ. ಚಿಕ್ಕನಾಯಕನಹಳ್ಳಿಯನ್ನು ಗುಡಿಸಿ ಗುಂಡಾಂತರ ಮಾಡಿರೋ ಭ್ರಷ್ಟ ರಾಕ್ಷಸ ರಾಘವೇಂದ್ರ ಒಡೆಯರ್, ರೈತರ ಜಮೀನುಗಳನ್ನು ಗೊತ್ತೇ ಆಗದಂತೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ. ಕನ್ವರ್ಷನ್ ಹೆಸರಲ್ಲಿ ದಾಖಲೆ ಪಡೆದು ನಕಲಿ ದಾಖಲೆ ಸೃಷ್ಟಿಸ್ತಿದ್ದ ರಾಘವೇಂದ್ರ ಗ್ಯಾಂಗ್, ಮೂಲ ರೈತನ ರೀತಿಯಲ್ಲೇ ನಕಲಿ ಆಧಾರ್ ಕಾರ್ಡ್ ತಯಾರು ಮಾಡಿ ನೂರಾರು ರೈತರಿಗೆ ವಂಚನೆ ಎಸಗುತ್ತಿದ್ದರು. ಈ ಕುರಿತು ಕ್ರಮಕ್ಕೆ ಆಗ್ರಹಿಸಿ ನಿರಂತರವಾಗಿ BTV ವರದಿ ಮಾಡಿತ್ತು.

BTV ವರದಿ ಬಳಿಕ ಸರ್ಕಾರದಿಂದ ತನಿಖೆ ವೇಳೆ ಭ್ರಷ್ಟ ಸಬ್ ರಿಜಿಸ್ಟ್ರಾರ್ ರಾಘವೇಂದ್ರನ ಮತ್ತೊಂದು ಅಕ್ರಮ ಪತ್ತೆಯಾಗಿದೆ. ಹೌದು.. ಬೆಂಗಳೂರು ದಸ್ತಾವೇಜು ನೋಂದಣಿ ವೇಳೆ ರಾಜಸ್ವ ಸಂಗ್ರಹದಲ್ಲಿ ಲೋಪ ಎಸಗಿದ ಸಬ್ ರಿಜಿಸ್ಟ್ರಾರ್ ರಾಘವೇಂದ್ರ, ಸರ್ಕಾರದ ಬೊಕ್ಕಸಕ್ಕೆಯೇ ಬರೋಬ್ಬರಿ 11.41 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟು ಮಾಡಿದ್ದಾರೆ. ಹಾಗಾಗಿ ಎಚ್ಚೆತ್ತ ಸರ್ಕಾರ ಅತಿ ಭ್ರಷ್ಟ ಸಬ್ ರಿಜಿಸ್ಟ್ರಾರ್ ರಾಘವೇಂದ್ರ ಒಡೆಯರ್ನ್ನು ಕೆಲಸದಿಂದಲೇ ಕಿಕ್ಔಟ್ ಮಾಡಿ ಮನೆಗೆ ಕಳುಹಿಸಿದೆ.
ತುಮಕೂರಿನ ಚಿಕ್ಕನಾಯಕನಹಳ್ಳಿ ಉಪನೋಂದಣಿ ಕಚೇರಿ ಸಬ್ ರಿಜಿಸ್ಟ್ರಾರ್ ರಾಘವೇಂದ್ರ ಒಡೆಯರ್, ಈ ಹಿಂದೆ ಕಾಚರಕನಹಳ್ಳಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮುದ್ರಾಂಕ ಕಾಯ್ದೆ 1957ರ ಅನುಚ್ಛೇದ 14ರ ಅನ್ವಯ ಸ್ವತ್ತಿನ ಮಾರುಕಟ್ಟೆ ಮೌಲ್ಯಕ್ಕೆ ಶೇ.5.6 ಮುದ್ರಾಂಕ ಶುಲ್ಕ ಮತ್ತು ಶೇ.1 ನೋಂದಣಿ ಶುಲ್ಕ ಸ್ವೀಕರಿಸಬೇಕು. ಕ್ರಯ ಪತ್ರದಲ್ಲಿ ನಮೂದಿಸಿದಂತೆ 4 ಕೋಟಿ ರೂ. ಮಾರುಕಟ್ಟೆ ಮೌಲ್ಯಕ್ಕೆ 22.40 ಲಕ್ಷ ರೂ. ಮುದ್ರಾಂಕ ಮತ್ತು 4 ಲಕ್ಷ ರೂ. ನೋಂದಣಿ ಶುಲ್ಕ ವಸೂಲಿ ಮಾಡಬೇಕಿತ್ತು. ಆದರೆ, ಸಬ್ ರಿಜಿಸ್ಟ್ರಾರ್ ರಾಘವೇಂದ್ರ ಒಡೆಯರ್ ಮುದ್ರಾಂಕ ಶುಲ್ಕ 500 ರೂ. ಮತ್ತು ನೋಂದಣಿ ಶುಲ್ಕ 200 ರೂ. ಮಾತ್ರ ಸ್ವೀಕರಿಸಿದ್ದಾರೆ. ಇದರಿಂದ 26.39 ಲಕ್ಷ ರೂ. ರಾಜಸ್ವ ನಷ್ಟ ಉಂಟಾಗಿದೆ. ನೋಂದಣಿ ವೇಳೆ ಪಕ್ಷಕಾರರ ಭಾವಚಿತ್ರ, ಹೆಬ್ಬೆಟ್ಟಿನ ಗುರುತು ಮತ್ತು ಸಹಿಯನ್ನು ದಸ್ತಾವೇಜಿನ ಹಿಂಬರಹದಲ್ಲಿ ಕಾವೇರಿ ತಂತ್ರಾಶದಿಂದ ಪಡೆದಿಲ್ಲ. ಬದಲಿಗೆ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ನೋಂದಾಯಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಐದು ಸ್ವತ್ತಿನ ಸಂಬಂಧ ಸ್ವಾಧೀನ ಸಹಿತ ಕ್ರಯದ ಕರಾರು ಪತ್ರಗಳಿಗೆ ತಿದ್ದುಪಡಿ ಪತ್ರವನ್ನು ಮಾಡಿದ್ದಾರೆ. ಅಂತರ್ಜಾಲದ ಮೂಲಕ ಪಡೆದ ಆರ್‌ಟಿಸಿಗೂ ಮತ್ತು ನೋಂದಣಿ ಮಾಡಿದ ಪತ್ರದಲ್ಲಿನ ಹೆಸರಿಗೂ ತಾಳೆ ಆಗುತ್ತಿಲ್ಲ. ತಿದ್ದುಪಡಿ ಪತ್ರಗಳನ್ನು ಸ್ಪೆಷಲ್ ಪವರ್ ಆಫ್ ಅಟಾರ್ನಿ ಮುಖಾಂತರ ನೋಂದಾಯಿಸಿದ್ದು, ಅಧಿಕಾರ ಪತ್ರಗಳ ಕೆನಡಾ ರಾಯಭಾರಿ ಕಚೇರಿಯ ಮುದ್ರೆ ಇದೆ.
ಹೊರದೇಶದಲ್ಲಿ ಎಕ್ಸಿಕ್ಯೂಟ್ ಆಗಿದ್ದು, ಜಿಪಿಎ ಪತ್ರಗಳಿಗೆ ಮುದ್ರಾಂಕ ಕಾಯ್ದೆ ಅನ್ವಯ ಅಡ್ಡುಡಿಕೇಷನ್ ಮಾಡಿರುವುದಿಲ್ಲ. ಆದ್ದರಿಂದ ಅಧಿಕೃತ ನೋಂದಣಿಗೆ ಪರಿಗಣಿಸಲು ಅವಕಾಶ ಇರುವುದಿಲ್ಲ. ಜಿಪಿಎ ಪತ್ರಗಳಲ್ಲಿ ಕುಟುಂಬದ ಹೊರಗಿನ ವ್ಯಕ್ತಿಗಳಿಗೆ ಕೊಟ್ಟಿರುವ ಕಾರಣಕ್ಕೆ ಸರ್ಕಾರಕ್ಕೆ ಮುದ್ರಾಂಕ ಮತ್ತು ನೋಂದಣಿ ಶುಲ್ಕ 11.15 ಕೋಟಿ ರೂ. ನಷ್ಟ ಉಂಟಾಗಿದೆ. ಈ ಕುರಿತು ಸಬ್ ರಿಜಿಸ್ಟ್ರಾರ್ ರಾಘವೇಂದ್ರ ಒಡೆಯರ್‌ಗೆ ಸಮಜಾಯಿಷಿ ಕೋರಿ ನೋಟಿಸ್ ನೀಡಲಾಗಿತ್ತು. ಆರೋಪಿತ ಅಧಿಕಾರಿ ನೀಡಿದ ಉತ್ತರ ಸಮರ್ಪಕವಾಗಿಲ್ಲ. ಎರಡು ಗಂಭೀರ ಪ್ರಕರಣಗಳಲ್ಲಿ ಕಾನೂನು ಬಾಹಿರವಾಗಿ ದಸ್ತಾವೇಜುಗಳನ್ನು ನೋಂದಾಯಿಸಿ ಸರ್ಕಾರಕ್ಕೆ ರಾಜಸ್ವ ನಷ್ಟ ಉಂಟು ಮಾಡಿದ ಆರೋಪದ ಮೇಲೆ ರಾಘವೇಂದ್ರ ಒಡೆಯರ್‌ಗೆ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ ಇಲಾಖೆ ಆಯುಕ್ತ ಕೆ.ಎ. ದಯಾನಂದ್ ಆದೇಶಿಸಿದ್ದಾರೆ.
ಇತ್ತೀಚಿಗೆ ಭ್ರಷ್ಟ ಅಧಿಕಾರಿ ರಾಘವೇಂದ್ರ ಒಡೆಯರ್ ಹಣದ ದಾಹಕ್ಕೆ ಬೇಸತ್ತ ರೈತರು ಹಾಗೂ ಸಾರ್ವಜನಿಕರು ಕೆಆರ್ ಎಸ್ ಪಕ್ಷದ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಾರ್ವಜನಿಕರಿಂದ ಸಂಗ್ರಹಿಸಿದ್ದ ಚಿಲ್ಲರೆ ಹಣವನ್ನು ರಾಘವೇಂದ್ರ ಒಡೆಯರ್ ಟೇಬಲ್ ಮೇಲೆ ಸುರಿದು ಘೋಷಣೆ ಕೂಗಿದ್ದರು. ಈ ವೇಳೆ ರಾಘವೇಂದ್ರ ಅವರು ಮುಜುಗರಕ್ಕೆ ಒಳಗಾಗಿದ್ದು, ನಂತರ ಹೊರಗಡೆ ಬಂದ ಕಾರ್ಯಕರ್ತರು ಸಬ್‌ರಿಜಿಸ್ಟ್ರಾರ್ ರಾಘವೇಂದ್ರ ಮೇಲೆ ಎಫ್‌ಐಆರ್ ಆಗಿದ್ದರೂ ಕೂಡ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಭ್ರಷ್ಟ ಅಧಿಕಾರಿ ರಾಘವೇಂದ್ರ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕ್ರಮಕ್ಕೆ ಆಗ್ರಹಿಸಿದ್ದರು.
