ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮಿ ಕೊನೆಗೂ ಅರೆಸ್ಟ್ – ವಕೀಲೆ ಜೀವಾ ಆತ್ಮಹತ್ಯೆ ಕೇಸಲ್ಲಿ ಬಂಧಿಸಿದ SIT!

ಬೆಂಗಳೂರು : ವಕೀಲೆ, ಉದ್ಯಮಿ ಜೀವಾ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮಿ ಅವರನ್ನು SIT ಅಧಿಕಾರಿಗಳು ಬಂಧಿಸಿದ್ದಾರೆ.

ಭೋವಿ ನಿಗಮದ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಒಟ್ಟು ಪ್ರಕರಣಗಳು ದಾಖಲಾಗಿದ್ದು ಪ್ರಕರಣವೊಂದರಲ್ಲಿ ಕನಕಲಕ್ಷ್ಮಿ ಅವರು ತನಿಖಾಧಿಕಾರಿ ಆಗಿದ್ದರು. ‘ವಿಚಾರಣೆ ನೆಪದಲ್ಲಿ ತನ್ನ ಬಳಿ ₹25 ಲಕ್ಷಕ್ಕೆ ಬೇಡಿಕೆಯಿಟ್ಟು ಮಾನಸಿಕ ಕಿರುಕುಳ ನೀಡಿದ್ದರು. ಜತೆಗೆ ವಿವಸ್ತ್ರಗೊಳಿಸಿ ಅಮಾನವೀಯವಾಗಿ ನಡೆದುಕೊಂಡಿದ್ದರು’ ಎಂದು ಆರೋಪಿಸಿ ವಕೀಲೆ ಜೀವಾ ಮರಣ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮರಣ ಪತ್ರದಲ್ಲಿ ಡಿವೈಎಸ್ಪಿ ಕನಕಲಕ್ಷ್ಮಿ ಅವರ ಹೆಸರು ಉಲ್ಲೇಖಿಸಿದ್ದರು.

ಮೃತ ಜೀವಾ ಸಹೋದರಿ ಸಂಗೀತಾ ನೀಡಿದ ದೂರು ಆಧರಿಸಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನಗರ ಪೊಲೀಸ್‌ ಆಯುಕ್ತ ದಯಾನಂದ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು. ಮತ್ತೊಂದೆಡೆ ಸಿಬಿಐ ತನಿಖೆ ಕೋರಿ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ಸಂಬಂಧ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪ್ರತ್ಯೇಕ ಎಸ್‌ಐಟಿ ರಚಿಸಿತ್ತು.

ವಿಶೇಷ ತಂಡ ರಚನೆಯ ಬೆನ್ನಲ್ಲೇ ಕನಕಲಕ್ಷ್ಮಿ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣ ಗಂಭೀರ ಸ್ವರೂಪದಿಂದ ಕೂಡಿದ್ದು ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್​ ಆದೇಶ ಹೊರಡಿಸಿತ್ತು. ಇದೀಗ ಡಿವೈಎಸ್‌ಪಿ ಕನಕಲಕ್ಷ್ಮಿ ಅವರನ್ನು SIT ಅಧಿಕಾರಿಗಳು ಬಂಧಿಸಿದ್ದಾರೆ.

Btv Kannada
Author: Btv Kannada

Leave a Comment

Read More

Read More