ನವದೆಹಲಿ : ಸಾರ್ವಜನಿಕರ ಆರೋಗ್ಯದ ಹಿತರಕ್ಷಣೆಯ ಆದ್ಯತೆಯಾಗಿ ಮಾರ್ಚ್ 22ರಂದು ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ಪ್ರಾಂಚೈಸಿಗಳು ಇತರ ಕಾರ್ಯಕ್ರಮಗಳ ಆಯೋಜನೆ ಸಮಯದಲ್ಲಿ ಕ್ರೀಡಾಂಗಣ ಮತ್ತು ಟಿವಿಯಲ್ಲಿ ತಂಬಾಕು ಉತ್ಪನ್ನ, ಮದ್ಯ ಪ್ರಚಾರದ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಐಪಿಎಲ್ ಆಡಳಿತ ಮಂಡಳಿಗೆ(BCCI) ಸೂಚನೆ ನೀಡಿದೆ.
ಈ ಸಂಬಂಧ ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಅವರಿಗೆ ಪತ್ರ ಬರೆದಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶಕ (DGHS)ಪ್ರೊ. ಡಾ. ಅತುಲ್ ಗೋಯೆಲ್, ಇದು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸುವ ತಮ್ಮ “ಸಾಮಾಜಿಕ ಮತ್ತು ನೈತಿಕ ಹೊಣೆಗಾರಿಕೆ ಎಂದು ಹೇಳಿದ್ದಾರೆ. ಹಾಗೆಯೇ ಯುವಜನತೆಗೆ ಮಾದರಿಯಾಗಿರುವ ಕ್ರಿಕೆಟಿಗರು ಯಾವುದೇ ರೀತಿಯ ತಂಬಾಕು ಅಥವಾ ಮದ್ಯದ ಜಾಹೀರಾತುಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲ ಸೂಚಿಸದಂತೆಯೂ ತಿಳಿಸಿದ್ದಾರೆ.
ಐಪಿಎಲ್ ಪಂದ್ಯಗಳು, ಟೂರ್ನಿಗೆ ಸಂಬಂಧಿಸಿದ ಕಾರ್ಯಕ್ರಮಗಳು, ಕ್ರೀಡಾಂಗಣ ಹಾಗೂ ಪಂದ್ಯಗಳ ನೇರಪ್ರಸಾರದ ಅವಧಿಯಲ್ಲಿ ಟಿವಿಯಲ್ಲಿ ಎಲ್ಲ ರೀತಿಯ ತಂಬಾಕು, ಮದ್ಯದ ಉತ್ಪನ್ನಗಳ ಜಾಹೀರಾತುಗಳನ್ನು ನಿಷೇಧಿಸುವ ನಿಯಮಗಳನ್ನು ಐಪಿಎಲ್ನಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ತಿಳಿಸಲಾಗಿದೆ.
ಐಪಿಎಲ್ ಭಾರತದಲ್ಲಿ ಅತಿಹೆಚ್ಚು ವೀಕ್ಷಣೆಗೆ ಒಳಪಡುವ ಟೂರ್ನಿಯಾಗಿದ್ದು, ಇದು ಜಾಹೀರಾತುದಾರರಿಗೆ ಉತ್ಪನ್ನಗಳ ಪ್ರಚಾರಕ್ಕೆ ಒಂದು ರೀತಿಯ ವರದಾನವಾಗಿದೆ. ಮದ್ಯ, ತಂಬಾಕು ವರ್ಗಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಉತ್ಪನ್ನಗಳ ಜಾಹೀರಾತಿನಲ್ಲಿ ಪಂದ್ಯದ ವಿಮರ್ಶಕರು ಸೇರಿ ಕ್ರಿಕೆಟಿಗರು ನೇರವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವುದನ್ನು ತಡೆಗಟ್ಟಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
