ಮುಂಬೈ : ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆಯಾಗಿದೆ.
“ವಿಮಾನದಲ್ಲಿ ಬಾಂಬ್ ಇದೆ” ಎಂಬ ಸಂದೇಶವಿರುವ ಪತ್ರವನ್ನು ಶೌಚಾಲಯದೊಳಗೆ ಪ್ರಯಾಣಿಕರೊಬ್ಬರು ಗಮನಿಸಿದ್ದು, ನಂತರ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ ಎಂದು ಸಹಾರ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬೆನ್ನಲ್ಲೇ ವಿಮಾನವನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.
ಮಾ.10 ರಂದು ಮುಂಬೈ-ನ್ಯೂಯಾರ್ಕ್ ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದಾಗ, ವಿಮಾನವು ಹಾರಾಟದ ಮಧ್ಯದಲ್ಲಿ ಸಂಭಾವ್ಯ ಭದ್ರತಾ ಬೆದರಿಕೆಯನ್ನು ಪತ್ತೆಹಚ್ಚಲಾಯಿತು. ಅಗತ್ಯ ಶಿಷ್ಟಾಚಾರಗಳನ್ನು ಅನುಸರಿಸಿದ ನಂತರ, ವಿಮಾನದಲ್ಲಿದ್ದ ಎಲ್ಲರ ಸುರಕ್ಷತೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ವಿಮಾನವು ಮುಂಬೈಗೆ ಮರಳಿತು.
ವಿಮಾನವು ಬೆಳಗ್ಗೆ 10:25 ಕ್ಕೆ ಮುಂಬೈನಲ್ಲಿ ಸುರಕ್ಷಿತವಾಗಿ ಇಳಿಯಿತು. ವಿಮಾನವು ಭದ್ರತಾ ಸಂಸ್ಥೆಗಳಿಂದ ಕಡ್ಡಾಯ ತಪಾಸಣೆಗೆ ಒಳಗಾಗುತ್ತಿದೆ. ಏರ್ ಇಂಡಿಯಾ ಅಧಿಕಾರಿಗಳಿಗೆ ತನ್ನ ಸಂಪೂರ್ಣ ಸಹಕಾರವನ್ನು ನೀಡುತ್ತಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಭದ್ರತಾ ಸಂಸ್ಥೆಗಳು ಪ್ರಸ್ತುತ ವಿಮಾನವನ್ನು ಪರಿಶೀಲಿಸುತ್ತಿದ್ದು, ಭದ್ರತಾ ಬೆದರಿಕೆಯ ಸ್ವರೂಪದ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಬೋಯಿಂಗ್ 777-300 ಇಆರ್ ವಿಮಾನದಲ್ಲಿ 19 ಸಿಬ್ಬಂದಿ ಸೇರಿದಂತೆ 322 ಜನರು ಪ್ರಯಾಣ ಮಾಡ್ತಿದ್ದರು.
