3ನೇ ಬಾರಿ ಫೈನಲ್​ನಲ್ಲಿ ಭಾರತ-ನ್ಯೂಜಿಲೆಂಡ್​ ಮುಖಾಮುಖಿ.. ಈ ಸಲ ಕಪ್​ ಯಾರಿಗೆ?

ದುಬೈ : 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮಾರ್ಚ್​ 9ರಂದು ದುಬೈನ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಟೂರ್ನಿಯ ಅಂತಿಮ ಹಣಾಹಣಿಯಲ್ಲಿ ಬಲಿಷ್ಠ ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿದೆ. ಮೊದಲ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಟೀಂ ಇಂಡಿಯಾ ಫೈನಲ್​ಗೇರಿದರೆ, ಇತ್ತ ದ್ವಿತೀಯ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಸೋಲುಣಿಸಿ ನ್ಯೂಜಿಲೆಂಡ್ ಫೈನಲ್ ಫೈಟ್​ಗೆ ಎಂಟ್ರಿ ಕೊಟ್ಟಿದೆ.

ವಿಶೇಷವೆಂದರೆ ಉಭಯ ತಂಡಗಳು ಐಸಿಸಿ ಟೂರ್ನಿಯ ಫೈನಲ್​ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಬಾರಿ. ಈ ಹಿಂದಿನ ಎರಡೂ ಫೈನಲ್​ಗಳಲ್ಲೂ ಕಿವೀಸ್ ಪಡೆ ಭಾರತದ ವಿರುದ್ಧ ಜಯ ಸಾಧಿಸಿತ್ತು.

ಹೌದು.. 2000ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮೊದಲ ಬಾರಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿತ್ತು. ಈ ವೇಳೆ ಟೀಂ ಇಂಡಿಯಾವನ್ನು 4 ವಿಕೆಟ್​ಗಳಿಂದ ಸೋಲಿಸಿ ನ್ಯೂಜಿಲೆಂಡ್ ಚೊಚ್ಚಲ ಐಸಿಸಿ ಟ್ರೋಫಿ ಮುಡಿಗೇರಿಸಿಕೊಂಡಿತ್ತು.

ಇದಾದ ಬಳಿಕ 2021ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಭಾರತಕ್ಕೆ 8 ವಿಕೆಟ್​ಗಳ ಸೋಲುಣಿಸಿ ನ್ಯೂಜಿಲೆಂಡ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಇದೀಗ ಮೂರನೇ ಬಾರಿಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಫೈನಲ್​ ಕದನಕ್ಕೆ ಸಜ್ಜಾಗಿದೆ. ಅದರಂತೆ ಮಾ. 9 (ಭಾನುವಾರ)ದುಬೈನ ಇಂಟರ್​​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಎರಡು ಫೈನಲ್ ಸೋಲುಗಳಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಳ್ಳಲಿದೆಯಾ ಅಥವಾ ನ್ಯೂಜಿಲೆಂಡ್ ಹ್ಯಾಟ್ರಿಕ್ ಫೈನಲ್ ಜಯ ಸಾಧಿಸಲಿದೆಯಾ ಎಂದು ಕಾದು ನೋಡಬೇಕಿದೆ.

Btv Kannada
Author: Btv Kannada

Leave a Comment

Read More

Read More